ರಾಯಚೂರು, ನ.20 (DaijiworldNews/PY): "ನಾವು ಭೂತಕಾಲದ ಬಗ್ಗೆ ಯೋಚನೆ ಮಾಡುವುದಿಲ್ಲ. ಭವಿಷ್ಯದಲ್ಲೂ ಕೂಡಾ ಬಿಜೆಪಿಯೇ ಜಯಭೇರಿ ಬಾರಿಸುವಂತೆ ಗಮನವಹಿಸುತ್ತೇವೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಿಂಧನೂರಿನ ನಗರದ ಖಾಸಗಿ ರೆಸಿಡೆನ್ಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಅಭ್ಯರ್ಥಿಗಳೇ ಜಯಭೇರಿ ಬಾರಿಸುವುದು ಖಚಿತ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕೂಡಾ ಬಿಜೆಪಿ ಗೆಲ್ಲಲಿದೆ" ಎಂದು ಭರವಸೆ ವ್ಯಕ್ತಪಡಿಸಿದರು.
"ನಮ್ಮ ಪಕ್ಷದಲ್ಲಿ ವಿಜಯೇಂದ್ರ ಅವರು ಪ್ರಮುಖ ನಾಯಕರು. ಸಿಎಂ ಬಿಎಸ್ವೈ ಅವರು ನಮ್ಮ ನಾಯಕರು. ನಮ್ಮ ನಡುವೆ ಯಾವುದೇ ರೀತಿಯಾದ ಗೊಂದಲವಿಲ್ಲ. ಗೆಲುವಿಗಾಗಿ ಪಕ್ಷ ಎಲ್ಲರನ್ನೂ ಬಳಸಿಕೊಳ್ಳುತ್ತದೆ" ಎಂದು ಹೇಳಿದರು.
ಸಚಿವ ಸಂಪುಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಸಂಬಂಧ ಮುಖ್ಯಮಂತ್ರಿ ಹಾಗೂ ಕೇಂದ್ರದ ನಾಯಕರು ಮಾತನಾಡಿದ್ದಾರೆ. ದೆಹಲಿಗೆ ತೆರಳಿದವರು ಏನು ಹೇಳಬೇಕೋ ಅದನ್ನು ಹೇಳಿದ್ದಾರೆ" ಎಂದರು.
ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾತನಾಡಿದ ಅವರು, "ಈ ಬಗ್ಗೆ ಶಾಸಕ ಸೋಮಶೇಖರ ರೆಡ್ಡಿ ಅವರ ಹೇಳಿಕೆಯನ್ನು ಕೇಳಿದ್ದೇನೆ. ಎಲ್ಲರನ್ನೂ ಕೂಡಾ ಕರೆದು ಮಾತನಾಡಿ ಈ ಬಗ್ಗೆ ಸಮಸ್ಯೆಯನ್ನು ನಿವಾರಿಸುತ್ತೇನೆ" ಎಂದು ತಿಳಿಸಿದರು.