ಚನ್ನಪಟ್ಟಣ, ನ.20 (DaijiworldNews/HR): ಬೇರೆ ಪಕ್ಷಗಳ ಜತೆ ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊಳ್ಳೆಗಾಲದ ಹನೂರಿನಲ್ಲಿ ಕಾಂಗ್ರೆಸ್ - ಬಿಜೆಪಿ ಮೈತ್ರಿಯಾಗಿವೆ, ನವಲಗುಂದದಲ್ಲಿ ಕಾಂಗ್ರೆಸ್ - ಬಿಜೆಪಿ ಮೈತ್ರಿಯಾಗಿವೆ. ಹಾಗಾಗಿ ಸ್ಥಳೀಯವಾಗಿ ಮೂರು ಪಕ್ಷದವರು ಹೊಂದಾಣಿಕೆಯಾಗುತ್ತಿದ್ದಾರೆ. ಅದು ಸ್ಥಳೀಯ ವಿಚಾರ ಎಂದರು.
ಇನ್ನು ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿಯಾಗಿದೆ ಎಂದಾಕ್ಷಣ ಜೆಡಿಎಸ್ ಗೆ ಬಿಜೆಪಿ ಬಗ್ಗೆ ಮೃದುಧೋರಣೆ ಇದೆ ಎಂದು ತಿಳಿಯಬೇಡಿ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.