ಬೆಂಗಳೂರು, ನ. 19 (DaijiworldNews/SM): ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಬಗ್ಗೆ ದೈಜಿವರ್ಲ್ಡ್ ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅದರ ಜೊತೆ ಜೊತೆಗೆ ಕರಾವಳಿಯ ಮುಖಂಡರೊಬ್ಬರಿಗೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿಯ ನಿಯಮಾವಳಿ ಪ್ರಕಾರ 75 ವರ್ಷದ ಬಳಿಕ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸುವಂತಿಲ್ಲ. ಅಧಿಕಾರ ವಹಿಸಿ, ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಲು ಅವಕಾಶ ಇಲ್ಲ. ಆದರೆ, ರಾಜ್ಯದ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ 2021 ಫೆಬ್ರವರಿಗೆ 79 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಯಡಿಯೂರಪ್ಪನವರಿಗೆ ೪ ವರ್ಷ ಹೆಚ್ಚುವರಿ ಅಧಿಕಾರ ನೀಡಲಾಗಿದೆ. ಇನ್ನು ಹೆಚ್ಚುವರಿ ಅವಕಾಶ ನಿಡಿದ್ದಲ್ಲಿ ಬಿಜೆಪಿ ಪಕ್ಷದೊಳಗಿಂದಲೇ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಆಪರೇಶನ್ ಕಮಲ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ 1 ವರ್ಷ ಅಧಿಕಾರದ ಭರವಸೆ ನೀಡಲಾಗಿತ್ತು. ಆದರೆ ಕೊರೊನಾದಿಂದಾಗಿ ಸಿಎಂಗೆ ಹೆಚ್ಚಿದ ಕಾಲಾವಕಾಶ ನೀಡಲಾಗಿತ್ತು. ಆದರೆ ಇದೀಗ ಯಡಿಯೂರಪ್ಪ ಸಿಎಂ ಆಗಿ 2 ವರ್ಷ ತುಂಬುತ್ತಿದೆ. 2021 ಫೆಬ್ರವರಿಗೆ ಯಡಿಯೂರಪ್ಪನವರಿಗೆ 79 ವರ್ಷ ಆಗಲಿದೆ. ಹೀಗಾಗಿ ಫೆಬ್ರವರಿ ಬಳಿಕ ವಯಸ್ಸಿನ ನಿರ್ಬಂಧ ಹೇರಿ ನಾಯಕತ್ವ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಎರಡು ಬಾರಿ ದೆಹಲಿ ವರಿಷ್ಟದ ಭೇಟಿಗೆ ವಿಫಲರಾದ ಸಿಎಂ ಬಿಎಸ್ ವೈ?
ಇನ್ನು ಈಗಾಗಲೇ ಸಂಪುಟ ವಿಸ್ತರಣೆಗೆ ಪ್ರತಿ ಸಂದರ್ಭದಲ್ಲೂ ವಿಘ್ನ ಎದುರಾಗುತ್ತಿದೆ. ಎರಡೂ ಬಾರಿಯೂ ಮಾತುಕತೆಯಿಂದ ಅಮಿತ್ ಶಾ ತಪ್ಪಿಸಿಕೊಂಡಿದ್ದಾರೆ. ಸಿಎಂ ಬಿಎಸ್ ವೈಯವರು ಮಂಗಳೂರಿಗೆ ಬಂದ ಸಂದರ್ಭ ಬೈ ಎಲೆಕ್ಷನ್ ಬಳಿಕ ದೆಹಲಿಗೆ ತೆರಳುತ್ತೇನೆ. ಹೈಕಮಾಂಡ್ ಜತೆ ಮಾತನಾಡಿ, ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಸದ್ಯ ಸಿಎಂ ಭೇಟಿಯಿಂದ ಅಮಿತ್ ಶಾ ತಪ್ಪಿಸಿಕೊಳ್ಳುತ್ತಿದ್ದಾರೆ. ಬುಧವಾರದಂದು ದೆಹಲಿಗೆ ತೆರಳಿದಾಗಲೂ ಕೇವಲ ನಡ್ಡಾ ಭೇಟಿಯಾಗಿ ಸಿಎಂ ಬಿಎಸ್ವೈ ಮರಳಿದ್ದಾರೆ. ಕೇವಲ 15 ನಿಮಿಷಗಳ ಕಾಲ ನಡ್ಡಾ ಜತೆ ಮಾತುಕತೆ ನಡೆಸಿ ಸಿಎಂ ಬಿಎಸ್ ವೈ ವಾಪಾಸ್ಸಾಗಿದ್ದಾರೆ.
ಕರಾವಳಿ ಮೂಲದ ನಾಯಕರೊಬ್ಬರಿಗೆ ಸಿಎಂ ಸ್ಥಾನ:
ಇನ್ನು ನಾಯಕತ್ವ ಬದಲಾವಣೆಯಿಂದಾಗಿ ಹೊಸ ಸಿಎಂ ನೇಮಕಕ್ಕೆ ಸಂಬಂಧಿಸಿದಂತೆ ಕರಾವಳಿ ಮೂಲದ ರಾಜಕಾರಣಿಯೊಬ್ಬರ ಹೆಸರು ಪ್ರಸ್ತಾಪವಾಗುತ್ತಿದೆ. ಅಮಿತ್ ಶಾ ತಂಡದ ಕಣ್ಣು ಕರಾವಳಿ ನಾಯಕನ ಮೇಲೆ ಇದೆ ಎನ್ನಲಾಗಿದೆ. ಕರಾವಳಿ ಮುಖಂಡರ ಪೈಕಿ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಸದಾನಂದ ಗೌಡ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಕೇಂದ್ರದ ನಾಯಕರ ಜತೆ ಸದಾನಂದ ಗೌಡ ಅವರು, ಆಪ್ತರಾಗಿ ಗುರುತಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರ ಹೆಸರು ಮುನ್ನೆಲೆಯಲ್ಲಿದೆ. ಅಲ್ಲದೆ, ಈ ಹಿಂದೆ ಡಿವಿ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.
ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಕೂಡ ಕೇಳಿಬರುತ್ತಿದೆ. ಈಗಾಗಲೇ ಅನಿರೀಕ್ಷಿತ ಎಂಬಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ಅವರಿಗೆ ಹೈಕಮಾಂಡ್ ನೀಡಿದೆ. ಇದರ ಮುಂದುವರೆದ ಭಾಗವಾಗಿ ಸಿಎಂ ಸ್ಥಾನ ಸಿಗುವುದೇ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಮತ್ತೊಂದೆಡೆ ಉತ್ತರ ಕನ್ನಡದ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೆಸರು ಕೂಡ ಕೇಳಿಬರುತ್ತಿದೆ.