ಪಾಟ್ನಾ, ನ. 19 (DaijiworldNews/MB) : ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ರಚನೆಯಾಗಿ ಒಂದು ವಾರ ಕಳೆಯುವುದರೊಳಗಾಗಿ ನೂತನ ಶಿಕ್ಷಣ ಸಚಿವರಾಗಿದ್ದ ಮೇವಾಲಾಲ್ ಚೌಧರಿ ಅವರು ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಜೆಡಿಯುನ ಮೆವಾಲಾಲ್ ಚೌಧರಿ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಿರುವುದಕ್ಕೆ ವಿರೋಧ ಪಕ್ಷವಾದ ಆರ್ಜೆಡಿ ಹಾಗೂ ಅದರ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸಿತ್ತು.
2017ರಲ್ಲಿ ಭಗಲ್ ಪುರ್ ಸಬುರ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮೇವಾಲಾಲ್ ಚೌಧರಿ ಅವರು ಭಾರಿ ಹಗರಣಗಳನ್ನು ಮಾಡಿರುವ ಆರೋಪವಿದೆ. ವಿಶ್ವವಿದ್ಯಾಲಯದ 161 ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕ ಮತ್ತು ಕಿರಿಯ ವಿಜ್ಞಾನಿಗಳಿಂದ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಮೇವಾಲಾಲ್ ಚೌಧರಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು.
ಭ್ರಷ್ಟಾಚಾರದ ಆರೋಪವಿರುವವರನ್ನೇ ಸಚಿವರನ್ನಾಗಿ ಮಾಡಿದ ಕಾರಣವನ್ನೇ ಹಿಡಿದು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.