ನವದೆಹಲಿ, ನ. 19 (DaijiworldNews/MB) : ಸೋಂಕು ಹೆಚ್ಚಾಗುತ್ತಿದ್ದರೂ ಯಾಕೆ ಎಚ್ಚೆತ್ತುಕೊಂಡಿಲ್ಲ? ಎಂದು ದೆಹಲಿ ಹೈಕೋರ್ಟ್ ಗುರುವಾರ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ವಕೀಲ ರಾಕೇಶ್ ಮಲ್ಹೋತ್ರಾ ಅವರು, ದೆಹಲಿಯಲ್ಲಿ ಕೊರೊನಾ ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಹಿಮಾ ಕೊಹ್ಲಿ, ಸುಬ್ರಮೋನಿಯಂ ಪ್ರಸಾದ್ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠವು, ''ಸೋಂಕು ಹೆಚ್ಚಾಗುತ್ತಿದ್ದರೂ ಎಚ್ಚೆತ್ತುಕೊಂಡಿಲ್ಲ ಯಾಕೆ?'' ಎಂದು ಸರ್ಕಾರವನ್ನು ಪ್ರಶ್ನಿಸಿದೆ.
''ಕಳೆದ 18 ದಿನಗಳಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಬಂಧಕರಿಗೆ ನೀವು ವಿವರಣೆ ನೀಡುತ್ತೀರಾ. ಕೋರ್ಟ್ ಮಧ್ಯ ಪ್ರವೇಶ ಮಾಡುವವರೆಗೂ ನೀವು ಈ ಕೊರೊನಾ ಸಂದರ್ಭದಲ್ಲಿ ವಿವಾಹ ಸಮಾರಂಭಕ್ಕೆ ಹಾಜರಾಗುವ ಜನರ ಸಂಖ್ಯೆಯನ್ನು 50 ಕ್ಕೆ ಯಾಕೆ ಇಳಿಸಿಲ್ಲ'' ಎಂದು ಕೂಡಾ ಸರ್ಕಾರದ ವಿರುದ್ದ ಚಾಟಿ ಬೀಸಿದೆ.
''ನವೆಂಬರ್ನಿಂದ ಕೊರೊನಾ ಪ್ರಕರಣಗಳು ಯಾವ ರೀತಿ ಹೆಚ್ಚಳವಾಗುತ್ತಿದೆ ಎಂಬುದನ್ನು ನೀವು ಗಮನಿಸಿದ್ದರೂ ಕೂಡಾ ಯಾವ ಕ್ರಮವನ್ನು ಈವರೆಗೆ ಕೈಗೊಂಡಿಂದ್ದೀರಿ. ನಿಮ್ಮನ್ನು ನವೆಂಬರ್ 11 ರಂದು ನಾವು ನಿದ್ರೆಯಿಂದ ಎಬ್ಬಿಸಬೇಕಾಯಿತು. ನವೆಂಬರ್ 1 ರಿಂದ ನವೆಂಬರ್ 11 ರವರೆಗೆ ನೀವು ಮಾಡಿದ್ದಾದರೂ ಏನು'' ಎಂದು ಹೈಕೋರ್ಟ್ ಪ್ರಶ್ನಿಸಿದೆ.