ಬೆಂಗಳೂರು, ನ. 19 (DaijiworldNews/MB) : ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಎರಡು ದಿನಗಳ ಹಿಂದೆ ಬಂಧನಕ್ಕೆ ಒಳಗಾದ ಆರೋಪಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ರ ಸಿಸಿಬಿ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ನ್ಯಾಯಾಲಯವು ಮಾಜಿ ಮೇಯರ್ ಸಂಪತ್ ರಾಜ್ರನ್ನು ಶುಕ್ರವಾರ(ನ.20) ಮಧ್ಯಾಹ್ನ 1:30ರವರೆಗೆ ಮತ್ತೆ ಒಂದು ದಿನ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಹಿನ್ನೆಲೆ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಆಗಸ್ಟ್ 11 ರಂದು ಭುಗಿಲೆದ್ದ ಗಲಭೆಯಲ್ಲಿ ಗಲಭೆಕೋರರು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಸಹೋದರಿಯ ಮನೆಯ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 421 ಮಂದಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯಾಗಿರುವ ಸಂಪತ್ ರಾಜ್ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದು ಎರಡು ದಿನಗಳ ಹಿಂದೆ ಬಂಧಿಸಿಲಾಗಿತ್ತು. ನ್ಯಾಯಾಲಯ ಸಂಪತ್ರನ್ನು ಎರಡು ದಿನ ಸಿಸಿಬಿ ಕಸ್ಟಡಿಗೆ ನೀಡಿತ್ತು.
ಕಸ್ಟಡಿ ಅವಧಿ ಗುರುವಾರಕ್ಕೆ ಅಂತ್ಯಗೊಳ್ಳುವ ಹಿನ್ನಲೆಯಲ್ಲಿ ಸಂಪತ್ರನ್ನು ಗುರುವಾರ ಸಿಸಿಬಿ ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮತ್ತೆ ಒಂದು ದಿನಕ್ಕೆ ಪೊಲೀಸ್ ಕಸ್ಟಡಿ ವಿಚಾರಣೆ ವಿಸ್ತರಿಸಲಾಗಿದೆ.