ತುಮಕೂರು,ನ.19 (DaijiworldNews/HR): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಉತ್ಸಾಹ ತೋರಿ ಬಿಜೆಪಿ ಹೈಕಮಾಂಡ್ ಭೇಟಿಯಾಗಿ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ, ಇದು ಸಿಎಂ ಬದಲಾವಣೆಯ ಮುನ್ಸೂಚನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸುವ ಆಸಕ್ತಿ ಬಿಜೆಪಿಗೆ ಇಲ್ಲ, ಹಾಗಾಗಿ ಯಡಿಯೂರಪ್ಪ ಅವರು ತೆಗೆದುಕೊಂಡು ಹೋಗಿದ್ದ ಪಟ್ಟಿಗೆ ಅನುಮೋದನೆ ನೀಡಲಿಲ್ಲ. ಅದರಲ್ಲಿ ಗೊತ್ತಾಗುತ್ತದೆ ಬಿಜೆಪಿಗೆ ಈಗ ಯಡಿಯೂರಪ್ಪ ಬೇಕಾಗಿಲ್ಲ" ಎಂಬುದು ಎಂದರು.
ಇನ್ನು ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿ ಆದರೆ ಕೇವಲ ಐದೇ ಐದು ನಿಮಿಷಗಳ ಭೇಟಿಗೂ ಕೇಂದ್ರ ಗೃಹಸಚಿವರು ಯಡಿಯೂರಪ್ಪಗೆ ಅವಕಾಶ ಕೊಟ್ಟಿಲ್ಲ. ಇದು ಕೇವಲ ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನವಲ್ಲ, ಬದಲಾಗಿ ಇಡೀ ರಾಜ್ಯಕ್ಕೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.