ನವದೆಹಲಿ, ನ. 19 (DaijiworldNews/MB) : ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ಈ ಘೋಷಣೆ ಮಾಡಿದ್ದ ಕಾಣೆಯಾದ ಮಕ್ಕಳ ಪತ್ತೆಗಾಗಿ ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ಮಹಿಳಾ ಹೆಡ್ ಕಾನ್ಸ್ ಟೇಬಲ್ ಒಬ್ಬರು ವಿಶೇಷ ಬಡ್ತಿ ಪಡೆದಿದ್ದಾರೆ. ಈ ಮೂಲಕ ಕಾಣೆಯಾದ ಮಕ್ಕಳ ಪತ್ತೆಗಾಗಿ ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಪೊಲೀಸ್ ಎಂಬ ಖ್ಯಾತಿಗೆ ಸೀಮಾ ಢಾಕಾ ಪಾತ್ರರಾಗಿದ್ದಾರೆ.
ಕಾಣೆಯಾದ 76 ಮಕ್ಕಳನ್ನು ಅವರು ಪತ್ತೆ ಮಾಡಿದ್ದಾರೆ. ಆ ಪೈಕಿ 56 ಮಕ್ಕಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕಾಣೆಯಾದ ಈ ಮಕ್ಕಳನ್ನು ದೆಹಲಿಯಿಂದ ಮಾತ್ರವಲ್ಲ, ಇತರ ರಾಜ್ಯಗಳಾದ ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ಅವರು ಪತ್ತೆ ಹಚ್ಚಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿಯ ಹೆಚ್ಚುವರಿ ಪೊಲೀಸ್ ಅಧಿಕಾರಿ ಅನಿಲ್ ಮಿತ್ತಲ್ "ಈ 76 ಮಕ್ಕಳು ಕಾಣಿಯಾಗಿರುವ ಬಗ್ಗೆ ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಹೆಡ್ ಕಾನ್ಸ್ ಟೇಬಲ್ ಸೀಮಾ ಢಾಕಾ ಅವರು ಪ್ರಾಮಾಣಿಕ ಮತ್ತು ಶ್ರಮದಾಯಕ ಪ್ರಯತ್ನ ಮಾಡಿದ್ದಾರೆ. ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಎರಡೂವರೆ ತಿಂಗಳ ಅವಧಿಯಲ್ಲಿ ಅವರು 76 ಮಕ್ಕಳನ್ನು ಪತ್ತೆಹಚ್ಚಿದ್ದಾರೆ" ಎಂದು ತಿಳಿಸಿದರು.
ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಪೊಲೀಸ್ ಸಿಬ್ಬಂದಿಯನ್ನು ಪ್ರೇರೇಪಿಸುವ ಸಲುವಾಗಿ, ಪೊಲೀಸ್ ಆಯುಕ್ತರು ಆಗಸ್ಟ್ 5, 2020 ರಂದು "14 ವರ್ಷಕ್ಕಿಂತ ಕೆಳಪಟ್ಟ ಕಾಣೆಯಾದ 50 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು 12 ತಿಂಗಳ ಒಳಗಾಗಿ ಪತ್ತೆಹಚ್ಚಿದ ಯಾವುದೇ ಕಾನ್ಸ್ಟೆಬಲ್ ಅಥವಾ ಹೆಡ್ ಕಾನ್ಸ್ಟೆಬಲ್ಗೆ ವಿಶೇಷ ಬಡ್ತಿ ನೀಡಲಾಗುವುದು" ಎಂದು ಹೇಳಿದ್ದರು.
ಇದಲ್ಲದೆ, ಒಂದೇ ಅವಧಿಯಲ್ಲಿ 15 ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆಹಚ್ಚುವವರಿಗೆ 'ಅಸಾಧಾರಣ ಕಾರ್ಯ ಪುರಾಸ್ಕರ' ನೀಡಲಾಗುವುದು ಎಂದು ಹೇಳಿದ್ದರು. ಈ ಆದೇಶವು ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿದೆ. ಆಗಸ್ಟ್ 2020 ರಿಂದ ಅಧಿಕ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ.
2019 ರ ಮಾಹಿತಿಯ ಪ್ರಕಾರ, ಕಾಣೆಯಾದ 5412 ಮಕ್ಕಳಲ್ಲಿ 3336 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಅಂದರೆ ಶೇ. 62 ರಷ್ಟು ಮಕ್ಕಳನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.