ನವದೆಹಲಿ, ನ. 19 (DaijiworldNews/MB) : ''ಡಿಜಿಟಲ್ ಇಂಡಿಯಾ ನಮ್ಮ ಜೀವನದ ಭಾಗವಾಗಿ ಬದಲಾವಣೆಯಾಗಿದ್ದು ಅದಕ್ಕೆ ಭೀಮ್ ಯುಪಿಐ(ಹಣ ಪಾವತಿ ಆಪ್) ಒಂದು ಉದಾಹರಣೆ. ಪ್ರಸ್ತುತ ನಮ್ಮ ಆಡಳಿತದ ಮಾದರಿ ಮೊದಲು ತಂತ್ರಜ್ಞಾನ ಎಂಬುದಾಗಿದೆ'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಕರ್ನಾಟಕ ಸರ್ಕಾರ, ಕರ್ನಾಟಕ ಇನ್ನೊವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ, ವಿಷನ್ ಗ್ರೂಪ್ ಆನ್ ಇನ್ಫಾರ್ಮೇಷನ್ ಟೆಕ್ನಾಲಜಿ, ಬಯೊಟೆಕ್ನಾಲಜಿ ಅಂಡ್ ಸ್ಟಾರ್ಟ್ ಅಪ್, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ಗಳ ಸಹಯೋಗದಲ್ಲಿ ಗುರುವಾರದಿಂದ 21ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್ ನಡೆಯಲಿದೆ.
ಗುರುವಾರ 'ಬೆಂಗಳೂರು ಟೆಕ್ ಸಮ್ಮಿಟ್-2020'ನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ''ಡಿಜಿಟಲ್ ಮತ್ತು ಟೆಕ್ ಸೊಲ್ಯೂಷನ್ಗಳಿಗೆ ಮಾರುಕಟ್ಟೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಸೃಷ್ಟಿ ಮಾಡಿದೆ. ಈಗ ಸರ್ಕಾರದ ಎಲ್ಲಾ ಯೋಜನೆಗಳ ಭಾಗ ತಂತ್ರಜ್ಞಾನವಾಗಿದೆ'' ಎಂದರು.
''ನಾವಿಂದು ಮಾಹಿತಿ ಯುಗದ ಮಧ್ಯಭಾಗದಲ್ಲಿದ್ದೇವೆ. ಈ ಯುಗದಲ್ಲಿ ಯಾರು ಮೊದಲು ಹೆಜ್ಜೆಯಿಡುತ್ತಾರೆ ಎಂಬುದು ಮುಖ್ಯವಲ್ಲ ಬದಲಾಗಿ ಯಾರು ಉತ್ತಮವಾಗಿ ಮುನ್ನಡೆಯುತ್ತಾರೆ'' ಎಂಬುದು ಮುಖ್ಯ ಎಂದು ಹೇಳಿದರು.
''ಸೈಬರ್ ಭದ್ರತೆಯನ್ನು ಅಭಿವೃದ್ಧಿಪಡಿಸುವಲ್ಲಿ ದೇಶದ ಯುವಜನತೆ ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಅಸಾಧಾರಣವಾದ ಯುವಶಕ್ತಿಯನ್ನು ಬಳಸಿಕೊಳ್ಳಬೇಕು. ದೇಶದಲ್ಲಿ ಯುವಜನತೆಯ ಸಾಮರ್ಥ್ಯ, ಪ್ರತಿಭೆ, ಅವರಿಗೆ ಸಿಗುವ ಅವಕಾಶಕ್ಕೆ ಅಂತ್ಯವಿಲ್ಲ'' ಎಂದರು.