ಧಾರವಾಡ, ನ.19 (DaijiworldNews/PY): "ನಾನು ಮೂವತ್ತು ವರ್ಷದಿಂದ ಪಕ್ಷದಲ್ಲಿದ್ದೇನೆ. ನಾನು ವಲಸೆ ಬಂದಿಲ್ಲ" ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಸಂಪುಟ ಪುನರ್ ರಚನೆಯಲ್ಲಿ ಸಚಿವ ಸ್ಥಾನ ಕೈ ತಪ್ಪುವ ವಿಚಾರದ ಸಂಬಂಧ ಮಾತನಾಡಿದ ಅವರು, "ನಾನು ಮೂವತ್ತು ವರ್ಷದಿಂದ ಪಕ್ಷದಲ್ಲಿ ಇದ್ದೇನೆ. ನಾನು ಮನೆಯಿಂದ ಸೀದಾ ಬಿಜೆಪಿಗೆ ಬಂದವನು. ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ" ಎಂದಿದ್ದಾರೆ.
"ನಮ್ಮನ್ನು ತೆಗೆಯುತ್ತಾರೆ ಎಂದು ಮಾಧ್ಯಮಗಳ ಮೂಲಕ ಮಾತ್ರ ಕೇಳಿ ಬರುತ್ತಿದೆ. ಆದರೆ, ಈ ವಿಚಾರವಾಗಿ ಮುಖ್ಯಮಂತ್ರಿ , ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರು ತಿಳಿಸಿಲ್ಲ. ನಾನು ಪಕ್ಷದ ಕಾರ್ಯಕರ್ತ ಹಾಗೂ ಶಿಸ್ತಿನ ಸಿಪಾಯಿ. ನಾನು ಹೈಕಮಾಂಡ್ನ ತೀರ್ಮಾನಕ್ಕೆ ಬದ್ದ" ಎಂದು ತಿಳಿಸಿದ್ದಾರೆ.
"ಸಿಎಂ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಮಾಡುವ ವಿಚಾರವನ್ನು ತಿಳಿಸಿದ್ದು, ಸಂಪುಟ ಪುನರ್ ರಚನೆ ಎಂದಿದ್ದಾರೆ. ನಮ್ಮ ಪಕ್ಷ ಯಾರು ಹಾಗೂ ಯಾರಿಗೆ ವಾಗ್ದಾನ ಮಾಡಿದ್ದಾರೆ ಅದನ್ನೆಲ್ಲಾ ಸಿಎಂ ಬಿಎಸ್ವೈ ಅವರು ಮಾಡುತ್ತಾರೆ ಎನ್ನುವ ಭರವಸೆ ಇದೆ" ಎಂದಿದ್ದಾರೆ.