ಬೆಂಗಳೂರು, ನ.18 (DaijiworldNews/PY): "ದೂರದರ್ಶನ ಚಂದನ ವಾಹಿನಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನ.23 ರಿಂದ 5-7ನೇ ತರಗತಿಗೆ ಸಂವೇದಾ ಇ-ಕ್ಲಾಸ್ ಪ್ರಾರಂಭವಾಗುತ್ತದೆ" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
"ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು, 5-7ನೇ ತರಗತಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನಗಳ ವಿಷಯಗಳ ವಿಡಿಯೋ ಪಾಠಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ" ಎಂದು ತಿಳಿಸಿದ್ದಾರೆ.
"ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8 ರಿಂದ 9.30 ಹಾಗೂ ಸಂಜೆ 5.30 ರಿಂದ 6 ಗಂಟೆಯವರೆಗೆ ತರಗತಿಗಳು ಪ್ರಸಾರವಾಗಲಿದ್ದು, ಪ್ರತಿ ದಿನ ನಾಲ್ಕು ಪಾಠಗಳನ್ನು ಪ್ರತಿ ಪಾಠ 30 ನಿಮಿಷಗಳ ಅವಧಿಯಂತೆ ಎರಡು ಗಂಟೆಗಳ ಕಾಲ ನಡೆಸಲಾಗುತ್ತದೆ" ಎಂದಿದ್ದಾರೆ.
"ತರಗತಿಗಳು ನಿಗದಿಯಾದ ವೇಳಾಪಟ್ಟಿಯ ಪ್ರಕಾರ ಡಿ.25ರವರೆಗೆ ಐದು ದಿನಗಳ ಕಾಲ ನಡೆಯಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರು ಈ ಕಾರ್ಯಕ್ರವನ್ನು ಅನುಪಾಲನೆ ಮಾಡುತ್ತಾರೆ. ಅಲ್ಲದೇ, ಆಯಾ ಜಿಲ್ಲೆಗಳ ಉಪನಿರ್ದೇಶಕರು ಈ ಪಾಠಗಳು ಮಕ್ಕಳಿಗೆ ತಲುಪುವ ನಿಟ್ಟಿನಲ್ಲಿ ಪ್ರಚಾರ ಮಾಡಬೇಕು" ಎಂದು ತಿಳಿಸಿದ್ದಾರೆ.