ಕೊಚ್ಚಿ, ನ.18 (DaijiworldNews/PY): ಪಾಲರಿವಟ್ಟಂ ಮೇಲ್ಸೇತುವೆ ಹಗರಣಕ್ಕೆ ಸಂಬಂಧಿಸಿದಂತೆ ಐಯುಎಂಎಲ್ ಪಕ್ಷದ ಶಾಸಕ ವಿ.ಕೆ. ಇಬ್ರಾಹಿಂ ಕುಂಜು ಅವರನ್ನು ಜಾಗೃತಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮೇಲ್ಸೇತುವೆ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ಅವಧಿಯ ಸಂದರ್ಭ ನಿರ್ಮಾಣವಾಗಿತ್ತು. ಅಲ್ಲದೇ, ಕಾಮಾಗಾರಿಯ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪ ಮಾಡಲಾಗಿತ್ತು. ಅಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಇಬ್ರಾಹಿಂ ಕುಂಜು ಅವರು ಈ ಕಾಮಗಾರಿಯಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಜಾಗೃತಿ ದಳದ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಕುಂಜು ಅವರನ್ನು ಆಸ್ಪತ್ರೆಯಲ್ಲೇ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂಜು ಅವರ ಬಂಧನಕ್ಕೂ ಮುನ್ನ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಜಾಗೃತಿ ದಳದವರು ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.