ಮುಂಬೈ, ನ. 18 (DaijiworldNews/MB) : ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಅವರ ಸೋದರಿ ರಂಗೋಲಿ ಚಾಂಡೆಲ್ಗೆ ಮುಂಬೈ ಪೊಲೀಸ್ ಮೂರನೇ ಬಾರಿ ಸಮನ್ಸ್ ಜಾರಿಗೊಳಿಸಿದೆ.
ಕಂಗನಾ ಮತ್ತು ಅವರ ಸಹೋದರಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿವಾದಾತ್ಮಕ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಯತ್ನವಾಗಿದೆ ಎಂದು ಕಂಗನಾ ಮತ್ತು ಅವರ ಸಹೋದರಿ ವಿರುದ್ದ ದೂರು ದಾಖಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ಕಳೆದ ಅಕ್ಟೋಬರ್ 26 ಮತ್ತು 27ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಆದರೆ ಇಬ್ಬರೂ ಕೂಡಾ ಬೇರೆ ಕಾರಣವನ್ನು ಹೇಳಿ ವಿಚಾರಣೆಗೆ ಹಾಜರಾಗಿರಲಿಲ್ಲ.
ಆ ಬಳಿಕ ನವೆಂಬರ್ 9 ಮತ್ತು 10ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಆದರೆ ಎರಡನೇ ಬಾರಿಯ ಸಮನ್ಸ್ಗೂ ಸೋದರಿಯರು ಕಿಮ್ಮತ್ತು ಕೊಡದೆ ವಿಚಾರಣೆಗೆ ಹಾಜರಾಗಿಲ್ಲ.
ಈಗ ಮತ್ತೆ ಮೂರನೇ ಬಾರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದು ನವೆಂಬರ್ 23 ಮತ್ತು 24ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.