ಬೆಂಗಳೂರು, ನ. 18 (DaijiworldNews/MB) : ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 7 ರಿಂದ 15ರವರೆಗೆ ಬೆಂಗಳೂರಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಈ ಹಿಂದೆ ಈ ಅಧಿವೇಶವನ್ನು ಬೆಳಗಾವಿಯಲ್ಲಿ ನಡೆಸುವ ಚಿಂತನೆ ನಡೆಸಲಾಗಿದ್ದು ಆದರೆ ಆರ್ಥಿಕ ಹಾಗೂ ಇತರೆ ಸಮಸ್ಯೆಗಳ ಕಾರಣ ಬೆಂಗಳೂರಿನಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಈ ಸಂದರ್ಭದಲ್ಲೇ ಮರಾಠ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ''ಅದು ಮರಾಠ ಅಭಿವೃದ್ಧಿ ಪ್ರಾಧಿಕಾರವಲ್ಲ, ಸಮುದಾಯ ಅಭಿವೃದ್ದಿ ನಿಗಮ. ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾಯಿಸಲು ತೀರ್ಮಾನಿಸಲಾಗಿದೆ. 'ಮರಾಠ ಸಮುದಾಯ ನಿಗಮ' ಎಂದು ಬದಲಾಯಿಸಲಾಗುತ್ತದೆ'' ಎಂದು ಹೇಳಿದರು.
''ಸಚಿವ ಸಂಪುಟವು ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುಮೋದನೆ ನೀಡಿದೆ. ಪ್ರಾಧಿಕಾರ ಮಾಡಬೇಕಾದರೆ ಕಾನೂನು ಮಾಡಬೇಕು. ಆದರೆ ನಿಗಮವನ್ನು ಸರ್ಕಾರವೇ ರಚಿಸಬಹುದು'' ಎಂದು ಸ್ಪಷ್ಟನೆ ನೀಡಿದರು.
''ಇನ್ನು ಈ ನಿಗಮಕ್ಕೆ ಎಷ್ಟು ಹಣ ನಿಗದಿ ಪಡಿಸುವುದು ಎಂದು ಇನ್ನೂ ಚರ್ಚೆ ನಡೆಸಿಲ್ಲ. ಒಂದು ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ಯಾಕಾಗಿ ವಿರೋಧ ಮಾಡುತ್ತಿದ್ದರೋ ತಿಳಿದಿಲ್ಲ. ಆದರೂ ನಾವು ಅಭಿವೃದ್ದಿಯ ದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ'' ಎಂದರು.
''ಹಾಗೆಯೇ ಪ್ರವಾಹ ಪೀಡಿತ ಜಿಲ್ಲೆಗಳಿಗೆ 1000 ಕೋಟಿ ರೂ. ಬಿಡುಗಡೆ ಮಾಡಲು ಸಂಪುಟ ನಿರ್ಧರಿಸಿದೆ. ನೆರೆ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಕಾಮಗಾರಿ ಆರಂಭಕ್ಕೆ ತೀರ್ಮಾನಿಸಲಾಗಿದೆ'' ಎಂದು ಕೂಡಾ ಇದೇ ವೇಳೆ ಮಾಹಿತಿ ನೀಡಿದರು.