ಗುಜರಾತ್, ನ.18 (DaijiworldNews/PY): ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದ ಸಬ್ ಇನ್ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಯೋರ್ವರು, ಸ್ಪೈಸ್ಜೆಟ್ ವಿಮಾನಯಾನ ಸಿಬ್ಬಂದಿಯೋರ್ವರಿಗೆ ಕಪಾಳಮೋಕ್ಷ ಮಾಡಿದ ಘಟನೆ ಗುಜರಾತ್ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಗುಜರಾತ್ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರದಂತೆ ಮೂವರು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದರು. ಇವರು ದೆಹಲಿಗೆ ಹೊರಡಲಿದ್ದ ಸ್ಪೈಸ್ ಜೆಟ್ ಎಸ್ಜಿ-8194ರಲ್ಲಿ ಟಿಕೆಟ್ ಕಾಯ್ದಿರಿಸಿದ್ದರು.
ಆದರೆ, ಇವರು ನಿಲ್ದಾಣಕ್ಕೆ ತಡವಾಗಿ ಬಂದಿದ್ದು ಅಲ್ಲದೇ, ಬೋರ್ಡಿಂಗ್ ಪಾಸ್ಗಳ ಬಗ್ಗೆ ಟಿಕೆಟ್ ಕೌಂಟರ್ನಲ್ಲಿದ್ದ ವಿಮಾನಯಾನ ಸಿಬ್ಬಂದಿಯೊಂದಿಗೆ ವಾದ ಮಾಡಲು ಆರಂಭಿಸಿದ್ದಾರೆ. ಆದರೆ, ಇವರು ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದ ಕಾರಣ ವಿಮಾನಯಾನ ಸಿಬ್ಬಂದಿ ಬೋರ್ಡಿಂಗ್ ಪಾಸ್ ನೀಡುವುದನ್ನು ನಿರಾಕರಿಸಿದ್ದಾರೆ. ಈ ವಿಚಾರದಿಂದ ಕೋಪಗೊಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಮಾನಯಾನ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಸಿಐಎಸ್ಎಫ್ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಸಬ್ ಇನ್ಸ್ ಪೆಕ್ಟರ್ ಹಾಗೂ ಮೂವರು ಪ್ರಯಾಣಿಕರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ವಿಮಾನಯಾನ ಸಿಬ್ಬಂದಿಗಳು ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಹಿಂಪಡೆಯಲಾಗಿದ್ದು, ವಿಮಾನ ಹತ್ತಲು ಸಬ್ ಇನ್ಸ್ಪೆಕ್ಟರ್ ಹಾಗೂ ಮೂವರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿಲ್ಲ ಎಂದು ವರದಿಗಳು ತಿಳಿಸಿವೆ.