ಬೆಂಗಳೂರು, ನ. 18 (DaijiworldNews/MB) : ಡಿಸೆಂಬರ್ 1 ರಂದು ನಡೆಯಲಿರುವ ಕರ್ನಾಟಕದ ಒಂದು ಸ್ಥಾನದ ರಾಜ್ಯಸಭಾ ಸ್ಥಾನಕ್ಕೆ ಮಂಗಳೂರು ಮೂಲದ ಪಕ್ಷದ ಕಾರ್ಯಕರ್ತ ಕೆ.ನಾರಾಯಣ್ ಅವರನ್ನು ಬಿಜೆಪಿಯ ಕೇಂದ್ರ ನಾಯಕತ್ವ ಮಂಗಳವಾರ ಆಯ್ಕೆ ಮಾಡಿದೆ.
ಜೂನ್ ತಿಂಗಳಲ್ಲಿ ರಾಜ್ಯಸಭೆಗೆ ಹೆಚ್ಚು ಜನರಿಗೆ ಪರಿಚಯವಿಲ್ಲದ ಈರಣ್ಣ ಹಾಗೂ ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು ಈಗ ಅಶೋಕ್ ಗಸ್ತಿಯವರ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಮಂಗಳೂರು ಮೂಲದ ಪಕ್ಷದ ಕಾರ್ಯಕರ್ತರೊಬ್ಬರನ್ನು ಆಯ್ಕೆ ಮಾಡಿದ್ದಾರೆ.
ಈರಣ್ಣ ಹಾಗೂ ಅಶೋಕ್ ಗಸ್ತಿ ಇಬ್ಬರೂ ವಿದ್ಯಾರ್ಥಿಗಳಾಗಿದ್ದ ಕಾಲದಿಂದಲೂ ಸಮರ್ಪಿತ ಕಾರ್ಮಿಕರಾಗಿದ್ದರು. ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಗಸ್ತಿಯವರು ಸುಮಾರು ಎರಡು ತಿಂಗಳ ಹಿಂದೆ ಕೊರೊನಾಗೆ ಬಲಿಯಾದರು. ಅಂದಿನಿಂದ ಆ ಸ್ಥಾನ ಖಾಲಿಯಿದ್ದು ಈ ಸ್ಥಾನವು ಗಸ್ತಿಯವರ ಪತ್ನಿ ಸುಮಾ ಗಸ್ತಿ ಅಥವಾ ಪುದುಚೇರಿಯ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಬಿಜೆಪಿ ನಾಯಕ ನಿರ್ಮಲ್ ಸುರಾನಾಗೆ ಸೇರಬೇಕು ಎಂದು ಪಕ್ಷದಲ್ಲಿ ಅಭಿಪ್ರಾಯ ಮೂಡಿಬಂದಿತ್ತು.
ಆದರೆ ಈಗ ಮತ್ತೆ ಅಚ್ಚರಿ ಮೂಡಿಸಿರುವ ಬಿಜೆಪಿ ಕೇಂದ್ರ ನಾಯಕರು ಮಂಗಳೂರಿನಲ್ಲಿ ಮುದ್ರಣಾಲಯವನ್ನು ನಡೆಸುತ್ತಿರುವ ನಾರಾಯಣ್ ಅವರನ್ನು ರಾಜ್ಯಸಭೆ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನಾರಾಯಣ್ ಅವರು ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಹಾಗೂ ಅದರ ಅಂಗ ಸಂಸ್ಥೆಗಳ ಕರಪತ್ರಗಳನ್ನು ಉಚಿತವಾಗಿ ಮುದ್ರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ಎಸ್ಎಸ್ನ ಹಿರಿಯ ನಾಯಕರೊಬ್ಬರು, ''ರಾಜ್ಯಸಭಾ ಸ್ಥಾನಕ್ಕೆ ನಾರಾಯಣ್ರವರು ಆಯ್ಕೆಯಾಗಿರುವುದು ಅನಿರೀಕ್ಷಿತ. ಅವರು ಕರಪತ್ರಗಳನ್ನು ಮುದ್ರಿಸುವ ಮೂಲಕ ಮಾತ್ರವೇ ಆರ್ಎಸ್ಎಸ್ ಮತ್ತು ಅದರ ಅಂಗ ಸಂಸ್ಥೆಗಳಿಗೆ ಸಹಾಯ ಮಾಡಿಲ್ಲ. ಬದಲಾಗಿ ಅವರು ಪಕ್ಷಕ್ಕಾಗಿ ಸಮರ್ಪಿತ ಮನೋಭಾವದಿಂದ ಕಾರ್ಯನಿರ್ವಹಿಸಿದ್ದಾರೆ. ಅವರು ನೇಕಾರ ಸಮುದಾಯಕ್ಕೆ ಸೇರಿದವರಾಗಿದ್ದು ಇದು ಕೂಡಾ ಗಸ್ತಿಯವರ ಸವಿತಾ ಸಮಾಜದಂತೆ ಕರ್ನಾಟಕದಲ್ಲಿ ಹಿಂದುಳಿದ ವರ್ಗವಾಗಿದೆ'' ಎಂದು ಹೇಳಿದರು.
ಹಾಗೆಯೇ ಮತ್ತೋರ್ವ ಬಿಜೆಪಿ ಮುಖಂಡ ಮಾತನಾಡಿ, ''ದೇಶದಲ್ಲಿ ಜನರಿಗೆ ಸಂದೇಶ ಕಳುಹಿಸಲು ಇಂತಹ ಆಯ್ಕೆಗಳನ್ನು ಮಾಡಲಾಗುತ್ತದೆ. ಮಾಧ್ಯಮಗಳು ನಿಧನರಾದ ಅಶೋಕ್ ಗಸ್ತಿ ಪತ್ನಿ ಸುಮಾ ಹಾಗೂ ಬಿಜೆಪಿಯ ಹಿರಿಯ ಮುಖಂಡ ನಿರ್ಮಲ್ಗೆ ರಾಜ್ಯ ಸಭಾ ಸ್ಥಾನ ದೊರೆಯುತ್ತದೆ ಎಂದು ತಿಳಿದಿದ್ದರು. ಆದರೆ ನಾರಾಯಣ್ ಅವರನ್ನು ಆಯ್ಕೆ ಮಾಡುವ ಮೂಲಕ, ರಾಷ್ಟ್ರೀಯ ಬಿಜೆಪಿ ನಾಯಕರು, ಸುಮಾರವರನ್ನು ಆಯ್ಕೆ ಮಾಡುವ ಮೂಲಕ ವಂಶಪಾರಂಪರ್ಯ ರಾಜಕೀಯಕ್ಕೆ ಪ್ರೋತ್ಸಾಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ. ಇನ್ನು ನಿರ್ಮಲ್ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಆದ್ದರಿಂದ ಅವರನ್ನು ಆಯ್ಕೆ ಮಾಡಿಲ್ಲ'' ಎಂದು ಹೇಳಿದರು.
ನಾರಾಯಣ್ ಅವರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ.