ಬೆಂಗಳೂರು, ನ. 18 (DaijiworldNews/MB) : "ಶಾಲೆಗಳು ಮತ್ತು ಪಿಯುಸಿಗಳನ್ನು ಪುನಃ ತೆರೆಯುವುದು ಮಂಗಳವಾರ ಪುನರಾರಂಭಗೊಂಡಿರುವ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಆರಂಭದ ಯಶಸ್ಸಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ" ಎಂದು ಕರ್ನಾಟಕ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ ನಾರಾಯಣ ಹೇಳಿದರು.
ಮಂಗಳವಾರ ಮತ್ತೆ ತೆರೆಯಲಾದ ಕೆಲವು ಕಾಲೇಜುಗಳ ಪರಿಶೀಲನೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆನ್ಲೈನ್ ತರಗತಿಗಳನ್ನು ನಡೆಸಲಾಗಿದ್ದರೂ ಹೆಚ್ಚಿನ ವಿದ್ಯಾರ್ಥಿಗಳು ತರಗತಿಯಿಂದ ತೃಪ್ತರಾಗಿಲ್ಲ. ಈ ಬಗ್ಗೆ ದೂರು ನೀಡುತ್ತಿದ್ದಾರೆ" ಎಂದು ಹೇಳಿದರು.
"ಹಾಗೆಯೇ ಶಾಲೆಗಳು ಮತ್ತು ಪಿಯುಸಿಗಳನ್ನು ಪುನಃ ತೆರೆಯುವುದು ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಆರಂಭದ ಯಶಸ್ಸಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಶಾಲೆಗಳು ಮತ್ತು ಪಿಯುಸಿ ಕಾಲೇಜುಗಳನ್ನು ಮತ್ತೆ ತೆರೆಯುವ ಮೊದಲು ರಾಜ್ಯ ಸರ್ಕಾರ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈಗ ಆರಂಭವಾಗಿರುವ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ಬಳಿಕ ಶಾಲೆ ಆರಂಭದ ಬಗ್ಗೆ ನಿರ್ಧರಿಸಲಾಗುವುದು" ಎಂದು ತಿಳಿಸಿದರು.
"ಕಾಲೇಜು ತರಗತಿಗಳ ಆರಂಭಕ್ಕೆ ಸರ್ಕಾರ ನಿರ್ಧರಿಸಿದ ಬಳಿಕ ಕೊರೊನಾ ಪರೀಕ್ಷೆ ಉಚಿತವಾಗಿ ಮಾಡಲು ವ್ಯವಸ್ಥೆ ಮಾಡಲಾಗಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಸಿಇಟಿ ಪರೀಕ್ಷೆಗೆ ಸಮಾಲೋಚನೆ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸಿಇಟಿಗೆ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ" ಎಂದು ಹೇಳಿದರು.