ಬೆಂಗಳೂರು, ನ. 17 (DaijiworldNews/SM): ಬಿಲ್ಡರ್ ರಾಜು ಪಾಟೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಕುರಿತಂತೆ ಬೆಂಗಳೂರಿನ 62ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದ್ದು, 10 ದಿನಗಳ ಕಾಲ ರವಿ ಪೂಜಾರಿ ಮುಂಬೈ ಪೊಲೀಸರ ವಶದಲ್ಲಿರಲಿದ್ದಾನೆ.
ಬಿಲ್ಡರ್ ರಾಜು ಪಾಟೀಲ್ ಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ನ್ಯಾಯಾಲಯಕ್ಕೆ ಹಾಜರು ಪಡಿಸಲು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಮಾಣಿಕ್ಯ ಅವರು ಆರೋಪಿಯನ್ನು 10 ದಿನಗಳ ಕಾಲ ಮುಂಬೈ ಪೊಲೀಸರ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ.
ಇನ್ನು ಆರೋಪಿ ಪರ ವಾದಿಸಿದ ವಕೀಲರು ರವಿಪೂಜಾರಿಯನ್ನು ಮುಂಬೈ ಪೊಲೀಸರ ವಶಕ್ಕೆ ನೀಡುವುದು ಸೂಕ್ತವಲ್ಲ. ಮುಂಬೈನಲ್ಲಿ ಕೊರೋನಾ ಹೆಚ್ಚಾಗಿದ್ದು ಮಾತ್ರವಲ್ಲದೆ, ರವಿ ಪೂಜಾರಿಗೆ ಬೆದರಿಕೆ ಇರುವ ಕಾರಣದಿಂದಾಗಿ ಅವರಿಗೆ ಅಪಾಯವಿದೆ. ಈ ಹಿನ್ನೆಲೆ ಮುಂಬೈ ಪೊಲೀಸರ ವಶಕ್ಕೆ ನೀಡದಂತೆ ವಾದಿಸಿದರು.
ಆದರೆ, ಕೋರ್ಟ್ ವಾದ ಆಲಿಸಿ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿ ರವಿಪೂಜಾರಿಯನ್ನು ಮುಂಬೈ ಪೊಲೀಸರ ವಶಕ್ಕೆ ನೀಡಿ ಆದೇಶ ನೀಡಿದೆ.