ಬೆಂಗಳೂರು, ನ.17 (DaijiworldNews/PY): ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ರನ್ನು ಬಂಧಿಸಲಾಗಿದ್ದು, ಅವರನ್ನು ಎರಡು ದಿನ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.
ಸಂಪತ್ ರಾಜ್ ಅವರು ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಸಿಸಿಬಿ ಐದು ತಂಡಗಳನ್ನು ರಚಿಸಿತ್ತು. ಹಾಗೆಯೇ ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಸಂಪತ್ ರಾಜ್ ಹುಡುಕಾಟ ನಡೆಸಿತ್ತು.
ಸಿಸಿಬಿ ಪೊಲೀಸರು ಸಂಪತ್ ರಾಜ್ ಅವರನ್ನು ಸೋಮವಾರ ರಾತ್ರಿ ಮನೆಯಲ್ಲೇ ಬಂಧಿಸಿದ್ದು, ಮಂಗಳವಾರ ನ್ಯಾಯಾಧೀಶರ ಎದುರು ಹಾಜರಿಪಡಿಸಿದ್ದಾರೆ.
ಬೆಂಗಳೂರು ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಂಪತ್ ರಾಜ್ ಪ್ರಮುಖ ಆರೋಪಿಯಾಗಿದ್ದು, ಅವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಿದೆ. ಈ ನಿಟ್ಟಿನಲ್ಲಿ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಧೀಶರನ್ನು ಸಿಸಿಬಿ ಪೊಲೀಸರು ಕೋರಿದ್ದರು. ಸಿಸಿಬಿ ಪೊಲೀಸರ ಮನವಿಯನ್ನು ಸ್ವೀಕರಿಸಿದ ನ್ಯಾಯಾಧೀಶರು ಆರೋಪಿ ಸಂಪತ್ ರಾಜ್ ಅವರನ್ನು ಎರಡು ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಹಿನ್ನೆಲೆ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಆಗಸ್ಟ್ 11 ರಂದು ಭುಗಿಲೆದ್ದ ಗಲಭೆಯಲ್ಲಿ ಗಲಭೆಕೋರರು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಸಹೋದರಿಯ ಮನೆಯ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 421 ಮಂದಿಯನ್ನು ಬಂಧಿಸಿದ್ದಾರೆ.