ಭೋಪಾಲ್, ನ.17 (DaijiworldNews/PY): ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರವು ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಯ್ದೆ ರೂಪಿಸಲು ನಿರ್ಧರಿಸಿದೆ.
ಉದ್ದೇಶಿತ ಕಾನೂನಿನ ಪ್ರಕಾರ, ಲವ್ ಜಿಹಾದ್ ಪ್ರಕರಣದ ಅಪರಾಧವು ಜಾಮೀನುರಹಿತವಾಗಿದೆ. ಅಲ್ಲದೇ, ಗರಿಷ್ಠ ಐದು ವರ್ಷ ಶಿಕ್ಷೆ ವಿಧಿಸುವ ಅವಕಾಶವಿದೆ.
ಈ ಬಗ್ಗೆ ಮಾತನಾಡಿದ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, "ಮುಂಬರುವ ವಿಧಾನಸಭೆಯ ಅಧಿವೇಶನದ ಸಂದರ್ಭ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020 ಅನ್ನು ಮಂಡಿಸಲಾಗುವುದು" ಎಂದು ಹೇಳಿದ್ದಾರೆ.
"ಮತಾಂತರದ ಉದ್ದೇಶದಿಂದ ಬಲವಂತವಾಗಿ ವಿವಾಹವಾಗುವ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಐದು ವರ್ಷ ಶಿಕ್ಷೆ ನೀಡುವ ಅವಕಾಶವಿದೆ. ಈ ಬಗ್ಗೆ ಹತ್ತಿರದ ಸಂಬಂಧಿಕರು ದೂರು ನೀಡುವುದು ಕಡ್ಡಾಯವಾಗಿದೆ" ಎಂದು ತಿಳಿಸಿದ್ದಾರೆ.
"ಇನ್ನು ಕಾಯ್ದೆಯಲ್ಲಿ, ಮತಾಂತರದ ಉದ್ದೇಶದಿಂದ ಆಗುವ ವಿವಾಹಗಳನ್ನು ಅಸಿಂಧು ಎಂದು ಘೋಷಿಸಲು ಅವಕಾಶವಿದೆ. ಅಲ್ಲದೇ, ಲವ್ ಜಿಹಾದ್ ಪ್ರಕರಣದಲ್ಲಿ ಮದುವೆಗೆ ಬೆಂಬಲಿಸುವ ವ್ಯಕ್ತಿಗಳನ್ನು ಕೂಡಾ ಆರೋಪಿಗಳು ಎಂದು ಪರಿಗಣಿಸಲಾಗುತ್ತದೆ" ಎಂದು ಹೇಳಿದ್ದಾರೆ.