ಬೆಂಗಳೂರು, ನ.17 (DaijiworldNews/PY): "ಈಗಾಗಲೇ ಕೌನ್ಸಿಲಿಂಗ್ ಮುಖೇನ ಸ್ಥಳ ನಿಯುಕ್ತಿಗೊಂಡಿರುವ ನೂತನ ಪಿಯುಸಿ ಉಪನ್ಯಾಸಕ ಅಭ್ಯರ್ಥಿಗಳಿಗೆ ನ.20ರಂದು ನೇಮಕಾತಿ ಆದೇಶಗಳನ್ನು ನೀಡಲಾಗುತ್ತದೆ" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಂಗಳಾರ ಬೆಳಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, "ಸಿಎಂ ಬಿಎಸ್ವೈ ಸವರು ನ.20ರಂದು ಸಾಂಕೇತಿಕವಾಗಿ ನೇಮಕಾತಿಯ ಆದೇಶವನ್ನು ನೀಡಲಿದ್ದಾರೆ" ಎಂದು ತಿಳಿಸಿದ್ದಾರೆ.
"ನೇಮಕಾತಿ ಆದೇಶವು ಕಾಲೇಜುಗಳು ಪ್ರಾರಂಭವಾದ ದಿನದಿಂದ ಜಾರಿಗೆ ಬರುತ್ತವೆ. ಇದಕ್ಕೂ ಮುನ್ನ ನೂತನ ಉಪನ್ಯಾಸಕರಿಗೆ ಉಪನ್ಯಾಸಕರ ವೃತ್ತಿ ಧರ್ಮ ಸೇರಿದಂತೆ ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಇಲಾಖೆಯ ನಿಯಮಗಳ ಬಗ್ಗೆ ಕಾರ್ಯಾಗಾರ ನಡೆಯಲಿದ್ದು, ಜಿಲ್ಲೆಗಳಲ್ಲಿ ಅಥವಾ ವಿಭಾಗಗಳಲ್ಲಿ ನಡೆಸಲಾಗುವುದು" ಎಂದಿದ್ದಾರೆ.
"ನವೆಂಬರ್ 23ರಿಂದ ಪಿಯು ಉಪನ್ಯಾಸಕರ ವರ್ಗಾವಣೆಗೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಲ್ಲದೇ. ಅಂದನಿಂದ ಅರ್ಜಿ ಸಲ್ಲಿಕೆಗೆ ಅವಕಾಶವಾಗಲಿದೆ" ಎಂದು ತಿಳಿಸಿದ್ದಾರೆ.