ಶಿವಮೊಗ್ಗ, ನ.17 (DaijiworldNews/PY): "ಚುನಾವಣೆಯ ಗೆಲುವಿನಲ್ಲಿ ವಿಜಯೇಂದ್ರ ಅವರ ಪ್ರಯತ್ನ ಇಲ್ಲವೆಂದು ಹೇಳಿಲ್ಲ. ಆದರೆ, ವಿಜಯೇಂದ್ರ ಅವರನ್ನು ಕೆಲವರು ವೈಭವೀಕರಿಸುವ ಕಾರ್ಯ ಮಾಡುತ್ತಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆ ವೇಳೆ ನಮ್ಮ ನಾಯಕರು ಪ್ರತಿ ಕ್ಷೇತ್ರಕ್ಕೂ ಕೂಡಾ 4-5 ಮಂದಿಯನ್ನು ಉಸ್ತುವಾರಿಯಾಗಿ ನೇಮಕ ಮಾಡುತ್ತಿದ್ದು, ಇದೇ ರೀತಿಯಾಗಿ ಶಿರಾ ಹಾಗೂ ಆರ್.ಆರ್ ನಗರ ಉಪಚುನಾವಣೆಯ ಸಂದರ್ಭ ನೇಮಕ ಮಾಡಲಾಗಿತ್ತು. ಆರ್.ಅಶೋಕ್ ಅವರು ಶಿರಾ ಕ್ಷೇತ್ರದಲ್ಲಿ ಕೆಲಸ ಮಾಡಿದಂತೆ ಆರ್.ಆರ್.ನಗರದಲ್ಲಿ ಕೂಡಾ ಕೆಲಸ ಮಾಡಿದ್ದಾರೆ" ಎಂದಿದ್ದಾರೆ.
"ರಾಜ್ಯದಲ್ಲಿ ಇಲ್ಲಿಯವರೆಗೆ ಹಲವಾರು ಪ್ರಾಧಿಕಾರಗಳು ರಚನೆಗೊಂಡಿವೆ. ಈ ಪ್ರಾಧಿಕಾರಗಳನ್ನು ಮುಖ್ಯಮಂತ್ರಿಗಳು ಸಮುದಾಯದ ಅಭಿವೃದ್ಧಿಗಾಗಿ ರಚಿಸಿದ್ದಾರೆ. ಆದರೆ, ಈ ವಿಚಾರವಾಗಿ ವಿರೋಧ ವ್ಯಕ್ತವಾಗುತ್ತಿದೆ. ಇದರ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ನಾಳೆಯೆ ಚರ್ಚಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಪ್ರಾಧಿಕಾರ ರಚನೆಗಾಗಿ ಲಿಂಗಾಯುತ ಸಮುದಾಯದವರು ಒತ್ತಾಯಿಸುತ್ತಿದ್ದಾರೆ. ಆದರೆ, ಪ್ರಾಧಿಕಾರ ರಚನೆಗೆ ಒತ್ತಾಯ ಮಾಡುವುದು ತಪ್ಪಲ್ಲ. ಈ ವಿಚಾರವಾಗಿ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ" ಎಂದಿದ್ದಾರೆ.