ಬೆಂಗಳೂರು, ನ 17. (DaijiworldNews/HR): ಇಂದು ರಾಜ್ಯಾದ್ಯಂತ ಪದವಿ ಕಾಲೇಜು ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ,ಬಹುತೇಕ ವಿದ್ಯಾರ್ಥಿಗಳು ಮೊದಲ ದಿನ ಆನ್ಲೈನ್ ತರಗತಿಯಲ್ಲಿ ಭಾಗಿಯಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ಹಾಗೂ ಪದವಿ ತರಗತಿಯ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಇಂದಿನಿಂದ ಆರಂಭವಾಗಿದೆ. ಸರ್ಕಾರದ ಸೂಚನೆಯಂತೆ ಎಲ್ಲ ಕಾಲೇಜುಗಳ ಆಡಳಿತ ಮಂಡಳಿ ಮಕ್ಕಳ ಸುರಕ್ಷಿತೆಗೆ ಸಿದ್ಧತೆ ಮಾಡಿಕೊಂಡಿದ್ದು, ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಲು ಬೇಕಾದ ವೇಳಾಪಟ್ಟಿಯನ್ನು ತಯಾರಿಸಿಕೊಂಡಿದ್ದಾರೆ.
ಇನ್ನು ಆನ್ ಲೈನ್ ಮತ್ತು ಕಾಲೇಜಿಗೆ ಬರಬಹುದೆಂಬ ಎರಡು ಆಯ್ಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಮೊದಲ ದಿನ ಆನ್ ಲೈನ್ ತರಗತಿಯಲ್ಲಿ ಭಾಗಿಯಾಗಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಬುಧವಾರದಿಂದ ತರಗತಿ ಬೋಧನೆಗೆ ಹಾಜರಾಗಲಿದ್ದಾರೆ ಎಂದು ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದ್ದಾರೆ.