ಬೆಂಗಳೂರು, ನ.17 (DaijiworldNews/PY): "ಒಬ್ಬ ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ ಡಿ.ಕೆ.ಶಿವಕುಮಾರ್ ಅವರೇ?" ಎಂದು ರಾಜ್ಯ ಬಿಜೆಪಿ ಕೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಡಿಕೆಶಿಯವರೇ ಈಗಲಾದರೂ ನನ್ನ ಪರವಾಗಿ ನಿಲ್ಲಿ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. ಸಂಪತ್ ರಾಜ್ ಬಂಧನದ ಬಳಿಕ ಹೇಳಿದ ಮಾತಿದು. ಕಾಂಗ್ರೆಸಿಗರೇ ಏನಾಗುತ್ತಿದೆ? ಒಬ್ಬ ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ ಡಿ.ಕೆ.ಶಿವಕುಮಾರ್ ಅವರೇ?" ಎಂದು ಪ್ರಶ್ನಿಸಿದೆ.
"ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕಾಲದಿಂದಲೇ ಕಾಂಗ್ರೆಸ್ ದಲಿತರ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲೂ ಅದರ ಮುಂದುವರೆದ ಭಾಗಗಳನ್ನು ಸಿದ್ದರಾಮಯ್ಯ ಅವರು ಮಾಡಿ ತೋರಿಸಿದ್ದಾರೆ. ಹಿರಿಯ ದಲಿತ ನಾಯಕರಾದ ಖರ್ಗೆ ಹಾಗೂ ಪರಮೇಶ್ವರ್ ಅವರ ಸೋಲುಗಳ ಹಿಂದೆ ಕಾಂಗ್ರೆಸ್ಸಿನ ದಲಿತ ವಿರೋಧಿ ನೀತಿಯಿದೆ" ಎಂದಿದೆ.
ಸಂಪತ್ ರಾಜ್ ಬಂಧನದ ಬಳಿಕ ಮಾಧ್ಯಗಳೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸ್ ಅವರು, "ಇನ್ನಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಮ್ಮ ಪರ ಇರಿ. ನನಗೆ ನ್ಯಾಯ ದೊರಕಿಸಿ ಕೊಡಿ. ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ಖಾನ್ ಅವರು ನಮ್ಮೊಂದಿಗಿದ್ದಾರೆ. ನನಗೆ ನ್ಯಾಯ ಸಿಗುವ ಭರವಸೆ ಇದೆ" ಎಂದು ಹೇಳಿದ್ದರು.