ಬೆಂಗಳೂರು, ನ.17 (DaijiworldNews/PY): "ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕೊನೆಗೂ ಬಂಧಿಸಲಾಗಿದ್ದು, ಇನ್ನಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಮ್ಮ ಪರ ಇರಿ. ನನಗೆ ನ್ಯಾಯ ದೊರಕಿಸಿ ಕೊಡಿ" ಎಂದು ಶಾಸಕ ಅಖಂಡ ಶ್ರೀನಿವಾಸ್ ಹೇಳಿದ್ದಾರೆ.
ಸಂಪತ್ ರಾಜ್ ಬಂಧನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮುಖ್ಯ ನ್ಯಾಯಾಧೀಶರ ಆದೇಶ ಹಾಗೂ ಸ್ವಾಮೀಜಿ ಅವರ ಮನವಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ನಷ್ಟದ ವಸೂಲಿಯನ್ನು ತಪ್ಪಿತಸ್ಥರಿಂದಲೇ ಬರಿಸಬೇಕು" ಎಂದಿದ್ದಾರೆ.
"ಇನ್ನಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಮ್ಮ ಪರ ಇರಿ. ನನಗೆ ನ್ಯಾಯ ದೊರಕಿಸಿ ಕೊಡಿ. ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ಖಾನ್ ಅವರು ನಮ್ಮೊಂದಿಗಿದ್ದಾರೆ. ನನಗೆ ನ್ಯಾಯ ಸಿಗುವ ಭರವಸೆ ಇದೆ" ಎಂದು ಹೇಳಿದ್ದಾರೆ.
"ಸಂಪತ್ ರಾಜ್ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಏಕೆ ಓಡಿ ಹೋಗುತ್ತಿದ್ದರು?. ಆತ ಓಡಿ ಹೋಗಬಾರದಿತ್ತು. ಆತ ತಪ್ಪೆಸಗಿದ್ದಾನೆ. ತಪ್ಪು ಯಾರೇ ಮಾಡಿರಲಿ ಅವರಿಗೆ ಶಿಕ್ಷೆ ಆಗಲೇಬೇಕು" ಎಂದು ಹೇಳಿದ್ದಾರೆ.
ಹಲವು ದಿನಗಳಿಂದ ಮಾಜಿ ಮೇಯರ್ ಸಂಪತ್ ರಾಜ್ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಸಿಸಿಬಿ ಐದು ತಂಡಗಳನ್ನು ರಚಿಸಿತ್ತು. ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಸಂಪತ್ ರಾಜ್ ಹುಡುಕಾಟ ನಡೆಸಿತ್ತು. ಸೋಮವಾರವಷ್ಟೇ ಸಂಪತ್ರಾಜ್ನ ಸ್ನೇಹಿತ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತ ನೀಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಕೊನೆಗೂ ಸಂಪತ್ ರಾಜ್ನ್ನು ಬಂಧಿಸಿದ್ದಾರೆ.