ಬೆಂಗಳೂರು, ನ. 17 (DaijiworldNews/MB) : ಕೊರೊನಾ ಸೋಂಕಿನ ಹಿನ್ನೆಲೆ ಕಳೆದ ಕೆಲವು ತಿಂಗಳಿನಿಂದ ಮುಚ್ಚಿರುವ ಇಂಜನಿಯರ್, ಡಿಪ್ಲೊಮಾ, ಪಿಜಿ, ಪದವಿ ಕಾಲೇಜುಗಳನ್ನು ಇಂದಿನಿಂದ ಮತ್ತೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರಾದ ಸುಧಾಕರ್ ಕೆ ಅವರು, ಕಾಲೇಜುಗಳ ಆಡಳಿತ ವರ್ಗದವರು, ವಿದ್ಯಾರ್ಥಿಗಳು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ರಾಜ್ಯದಲ್ಲಿ ಇಂದಿನಿಂದ ಪದವಿ ಕಾಲೇಜುಗಳು ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜುಗಳ ಆಡಳಿತ ವರ್ಗದವರು, ವಿದ್ಯಾರ್ಥಿಗಳು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಮನವಿ ಮಾಡುತ್ತೇನೆ. ಮಾಸ್ಕ್ ಧರಿಸುವುದು, ಕೈಗಳ ಶುಚಿತ್ವ, ಭೌತಿಕ ಅಂತರ ಕಾಪಾಡಲು ಮರೆಯದಿರಿ. ಆತಂಕ ಬೇಡ, ಆದರೆ ಎಚ್ಚರಿಕೆ ಇರಲಿ'' ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಕಾರಣದಿಂದ ಕಳೆದ ಹಲವು ತಿಂಗಳುಗಳಿಂದ ರಾಜ್ಯದಲ್ಲಿ ಮುಚ್ಚಿದ್ದ ಇಂಜನಿಯರ್, ಡಿಪ್ಲೊಮಾ, ಪಿಜಿ, ಪದವಿ ಕಾಲೇಜುಗಳು ಇಂದಿನಿಂದ ಮತ್ತೆ ಆರಂಭವಾಗಲಿದೆ. ರಾಜ್ಯ ಸರ್ಕಾರ ಈ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವಂತೆ ಆಸನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದೆ.