ಬೆಂಗಳೂರು, ನ. 17 (DaijiworldNews/MB) : ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ರನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮಾಜಿ ಮೇಯರ್ ಸಂಪತ್ ರಾಜ್ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಸಿಸಿಬಿ ಐದು ತಂಡಗಳನ್ನು ರಚಿಸಿತ್ತು. ಹಾಗೆಯೇ ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಸಂಪತ್ ರಾಜ್ ಹುಡುಕಾಟ ನಡೆಸಿತ್ತು. ಸೋಮವಾರವಷ್ಟೇ ಸಂಪತ್ರಾಜ್ನ ಸ್ನೇಹಿತ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತ ನೀಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಕೊನೆಗೂ ಸಂಪತ್ ರಾಜ್ನ್ನು ಬಂಧಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಆಗಸ್ಟ್ 11 ರಂದು ಭುಗಿಲೆದ್ದ ಗಲಭೆಯಲ್ಲಿ ಗಲಭೆಕೋರರು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಸಹೋದರಿಯ ಮನೆಯ ಮೇಲೆ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 421 ಮಂದಿಯನ್ನು ಬಂಧಿಸಿದ್ದಾರೆ.