ಜೈಪುರ, ನ. 16 (DaijiworldNews/HR): ಜೈಪುರದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸುಮಾರು ಕಳೆದ 7 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯು ಸಂತ್ರಸ್ತೆಯ ಮನೆಗೆ ನುಗ್ಗಿ ಬೆಂಕಿ ಹಚ್ಚಿ ಹತ್ಯೆ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಯಾಚಾರ ಆರೋಪಿ, ಆತನ ತಂದೆ ಹಾಗೂ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ.
ಆರೋಪಿಯು ಸಂತ್ರಸ್ತ ಮಹಿಳೆಯ ಸಂಬಂಧಿ ಮತ್ತು ಆಕೆಯ ಪಕ್ಕದ ಮನೆಯವನಾಗಿದ್ದು, ದೀಪಾವಳಿಯಂದೇ ಆಕೆಯ ಮನೆಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ. ಈ ಬಗ್ಗೆ ಸಂತ್ರಸ್ತ ಮಹಿಳೆಯಿಂದ ದೂರು ದಾಖಲಾಗಿದೆ. ಸಂತ್ರಸ್ತೆಯ ದೇಹದ ಶೇ. 50 ರಷ್ಟು ಬಾಗ ಸುಟ್ಟುಹೋಗಿದ್ದು, ಆರೋಪಿಗೆ ಶೇ.30 ರಷ್ಟು ಗಾಯಗಳಾಗಿವೆ ಎಂದು ಜೈಪುರದ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಯಶ್ವಂತ್ ಸಿಂಗ್ ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆಯು ಆರೋಪಿ ತಮ್ಮ ಮೇಲೆ 2018ರಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಈ ವರ್ಷ ಏಪ್ರಿಲ್ನಲ್ಲಿ ದೂರು ನೀಡಿದ್ದರು. ಅದಾದ ಬಳಿಕ 28 ವರ್ಷದ ಆರೋಪಿ ತಲೆಮರೆಸಿಕೊಂಡಿದ್ದ.
ಇದೀಗ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.