ವಿಜಯಪುರ, ನ. 16 (DaijiworldNews/HR): ರಾಜ್ಯದಲ್ಲಿ ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಹೋರಾಟಗಾರ ಎಂ.ಬಿ.ಪಾಟೀಲ ಅವರು ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ 1 ಕೋಟಿಗಿಂತಲೂ ಹೆಚ್ಚಿದ್ದು, ಇಷ್ಟು ದೊಡ್ಡ ಜನಸಂಖ್ಯೆಗೆ ಸದ್ಯ ಸಿಗುತ್ತಿರುವ ಮೀಸಲಾತಿ ಸೌಲಭ್ಯಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ನೆರೆಯ ಮಹಾರಾಷ್ಟ್ರ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ ಕೂಡ ಲಿಂಗಾಯತರಿಗೆ ಶೇ.16-18 ರಷ್ಟು ಮೀಸಲಾತಿಯನ್ನು ಶಿಕ್ಷಣ, ಉದ್ಯೋಗ, ಸ್ಕಾಲರ್ ಶಿಪ್ ಸೇರಿದಂತೆ ಎಲ್ಲ ಸೌಲಭ್ಯಗಳಲ್ಲಿ ನೀಡುವ ಮೂಲಕ ಲಿಂಗಾಯತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಕೆಲವರ ಬೇಡಿಕೆಯಂತೆ ಲಿಂಗಾಯತರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ 100-200 ಕೋಟಿ ಅನುದಾನ ಒದಗಿಸಿದರೆ ಅದರಿಂದ ಪ್ರಯೋಜನವಾಗುವದಿಲ್ಲ. ಈ ಅಭಿವೃದ್ಧಿ ಸ್ಥಾಪನೆ ಎಂಬುದು ಕೇವಲ ಕಣ್ಣೊರೆಸುವ ತಂತ್ರವಾಗುತ್ತದೆ. ನಿಜವಾಗಿ ಲಿಂಗಾಯತರಿಗೆ ರಾಜ್ಯ ಸರ್ಕಾರ ಶೇ.16-18ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.