ಪಟ್ನಾ, ನ. 16 (DaijiworldNews/MB) : ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದು ಈ ಸಮಾರಂಭವನ್ನು ನಾಯಕ ತೇಜಸ್ವಿ ಯಾದವ್ ಹಾಜರಾಗುವುದಿಲ್ಲ ಹಾಗೂ ಸಮಾರಂಭವನ್ನು ನಾವು ಬಹಿಷ್ಕರಿಸುತ್ತೇವೆ ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷವು ಸೋಮವಾರ ಪ್ರಕಟಿಸಿದೆ.
ಬದಲಾವಣೆ ಬಯಸಿರುವ ಜನಾದೇಶವು ಎನ್ಡಿಎಗೆ ವಿರುದ್ದವಾಗಿದೆ. ಆದರೆ ಈಗ ಜನಾದೇಶವನ್ನೇ ಬದಲಾವಣೆ ಮಾಡಲಾಗಿದೆ. ಸರ್ಕಾರದ ವಂಚನೆಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದು ಇದನ್ನು ನಿರುದ್ಯೋಗಿಗಳು, ರೈತರು, ಗುತ್ತಿಗೆ ಕೆಲಸಗಾರರು ಮತ್ತು ಶಿಕ್ಷಕರ ಬಳಿ ಕೇಳಿ ಎಂದು ಹೇಳಿದೆ.ಹಾಗೆಯೇ ನಾವು ಜನಪ್ರತಿನಿಧಿಗಳಾಗಿದ್ದು ಜನರೊಂದಿಗೆ ನಿಲ್ಲುತ್ತೇವೆ ಎಂದು ತಿಳಿಸಿದೆ.
ನವೆಂಬರ್ 10 ರಂದು ಆರಂಭವಾದ ಬಿಹಾರ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಸತತ 19 ಗಂಟೆಗಳ ಬಳಿಕ ಮುಗಿದ್ದಿದ್ದು ನಿತೀಶ್ ಕುಮಾರ್ ನೇತೃತ್ವದ ಬಿಜೆಪಿಯನ್ನು ಒಳಗೊಂಡ ಎನ್ಡಿಎ ಕೂಟವು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದು ಬಿಹಾರವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ-ಕಾಂಗ್ರೆಸ್ ಹಾಗೂ ಇತರ ಮೂರು ಪಕ್ಷಗಳನ್ನು ಒಳಗೊಂಡ ಮಹಾಘಟ ಬಂಧನ್ 110 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಭಾನುವಾರ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಎನ್ಡಿಎ ಸಭೆ ನಡೆಸಿದ್ದು ನಿತೀಶ್ ಕುಮಾರ್ ಅವರನ್ನು ಮುಂದಿನ ಮುಂಖ್ಯಮಂತ್ರಿ ಎಂದು ಎನ್ಡಿಎ ಕೂಟ ಘೋಷಿಸಿದೆ. ಇದರಂತೆ ಇಂದು ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಸತತ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.