ನವದೆಹಲಿ, ನ. 16 (DaijiworldNews/MB) : ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಬರೆದಿರುವ 902 ಪುಟಗಳ ಪುಸ್ತಕದಲ್ಲಿ ಮೋದಿಯವರ ಹೆಸರು ಕೂಡಾ ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟಾಂಗ್ ನೀಡಿದ್ದಾರೆ.
ಒಬಾಮ ಅವರ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಉಲ್ಲೇಖಿಸಲಾಗಿದೆ. "ರಾಹುಲ್ ಗಾಂಧಿ ಪುಕ್ಕಲು ಮತ್ತು ಅಸ್ಥಿರ ಗುಣಗಳನ್ನು ಹೊಂದಿದ್ದಾರೆ. ಅವರು ಅಭ್ಯಾಸ ಮಾಡುವ ವಿದ್ಯಾರ್ಥಿಯಂತೆ ಇದ್ದಾರೆ. ಹಾಗೆಯೇ ಶಿಕ್ಷಕರನ್ನು ಮೆಚ್ಚಿಸಲು ಉತ್ಸುಕರಾಗಿರುವ ವಿದ್ಯಾರ್ಥಿಯಂತೆ ಇದ್ದಾರೆ. ಆದರೆ ಆಳಕ್ಕೆ ಇಳಿದರೆ ಅವರಿಗೆ ವಿಷಯವನ್ನು ಕರಗತ ಮಾಡಿಕೊಳ್ಳುವ ಉತ್ಸಾಹ ಅಥವಾ ಒಲವು ಇಲ್ಲ" ಎಂದು ವಿಮರ್ಶಿಸಿದ್ದಾರೆ. ಈ ವಿಚಾರದಲ್ಲಿ ಹಲವು ಬಿಜೆಪಿ ಮುಖಂಡರು ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಶಶಿ ತರೂರ್, "ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಬರೆದಿರುವ 'ಎ ಪ್ರಾಮಿಸ್ಡ್ ಲ್ಯಾಂಡ್' ಪುಸ್ತಕದ ಮುಂಗಡ ಪ್ರತಿ ನನಗೆ ದೊರೆತಿದೆ. ನಾನು ಎಲ್ಲಾ ಪುಟಗಳನ್ನು ಓದಿಲ್ಲವಾದರೂ, ಸೂಚ್ಯಂಕದಲ್ಲಿ ತೋರಿಸಿರುವ ಭಾರತಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಓದಿದ್ದೇನೆ. ಅದರಲ್ಲಿ ಬ್ರೇಕಿಂಗ್ ನ್ಯೂಸ್ಯಿದೆ. 902 ಪುಟಗಳಲ್ಲಿ, ನರೇಂದ್ರ ಮೋದಿಯವರ ಹೆಸರು ಕೂಡಾ ಉಲ್ಲೇಖಿಸಿಲ್ಲ'' ಎಂದು ವ್ಯಂಗ್ಯವಾಡಿದ್ದಾರೆ.
"ಬುದ್ಧಿವಂತ, ಚಿಂತನಶೀಲ, ಚುರುಕಾದ, ಪ್ರಾಮಾಣಿಕ, ಅಸಾಮಾನ್ಯ ಬುದ್ಧಿವಂತಿಕೆ ಮತ್ತು ಸಭ್ಯತೆಯ ವ್ಯಕ್ತಿ" ಎಂದು ಡಾ. ಮನ್ಮೋಹನ್ ಸಿಂಗ್ ಅವರನ್ನು ಭಾರಿ ಪ್ರಶಂಸಿಸಿ ತಾನು ಹಾಗೂ ಮನ್ಮೋಹನ್ ಸಿಂಗ್ ಜೊತೆಗಿನ ಉತ್ತಮ ಸಂಬಂಧವನ್ನು ಪ್ರೀತಿಯಿಂದ, ಆನಂದದಿಂದ ಒಬಾಮರವರು ಹೊಗಳಿಸಿದ್ದಾರೆ ಎಂದು ತರೂರ್ ತಿಳಿಸಿದ್ದಾರೆ.
"ಎಲ್ಲಕ್ಕಿಂತ ಹೆಚ್ಚಾಗಿ, ಭಾರತದ ಬಗೆಗಿನ ನನ್ನ ಮೋಹವು ಮಹಾತ್ಮ ಗಾಂಧಿಯವರೊಂದಿಗೆ ಸಂಬಂಧ ಹೊಂದಿದೆ. ಲಿಂಕನ್, ಕಿಂಗ್ ಮತ್ತು ಮಂಡೇಲಾ ಅವರೊಂದಿಗೆ ಗಾಂಧಿ ಕೂಡಾ ನನ್ನ ಆಲೋಚನೆಗಳಿಗೆ ಆಳವಾದ ಪ್ರಭಾವ ಬೀರಿದರು" ಎಂಬ ಒಬಾಮ ಅವರ ಪುಸ್ತಕದಲ್ಲಿರುವ ವಿಚಾರವನ್ನು ಹಂಚಿಕೊಂಡಿರುವ ತರೂರ್, "ಆದರೆ, ಹಿಂಸೆ, ದುರಾಸೆ, ಭ್ರಷ್ಟಾಚಾರ, ರಾಷ್ಟ್ರೀಯತೆ, ವರ್ಣಭೇದ ನೀತಿ ಮತ್ತು ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಒಬಾಮ ಆತಂಕ ವ್ಯಕ್ತಪಡಿಸಿದ್ದಾರೆ" ಎಂದು ಟ್ವೀಟಿಸಿದ್ದಾರೆ.
"ಆತ್ಮಚರಿತ್ರೆಯಲ್ಲಿನ ಒಂದು ವಾಕ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತೋಷ ವ್ಯಕ್ತಪಡಿಸುತ್ತಿರುವ ಸಂಘಿಗಳು ಈ ವಿಚಾರಗಳನ್ನು ತಿಳಿದು ಅಧಿಕ ಆರಾಮವನ್ನು ಪಡೆಯುತ್ತಾರೆ ಎಂದು ನಾನು ಊಹಿಸಿಕೊಳ್ಳುವುದು ಕಷ್ಟ" ಎಂದು ಕೂಡಾ ಲೇವಡಿ ಮಾಡಿದ್ದಾರೆ.