ಬೆಂಗಳೂರು, ನ. 16 (DaijiworldNews/MB) : ಆನ್ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮನೆಹಾಳು ಗೇಮಿಂಗ್ಗಳ ಮೇಲೆ ನಿಷೇಧ ಹೇರಬೇಕು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ರಮ್ಮಿ,ಪೋಕರ್ ಸೇರಿ ಆನ್ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನಾನೂ ಕೂಡ ಹಲವು ಯುವಕರು ಈ ಆನ್ಲೈನ್ ಜೂಜಿನಲ್ಲಿ ವ್ಯಸ್ತರಾಗಿರುವುದನ್ನು ಗಮನಿಸಿದ್ದೇನೆ. ಎಷ್ಟೋ ಕುಟುಂಬಗಳು ಇದರಿಂದ ನಾಶವಾಗಿ ಹೋಗಿದೆ. ಹಾಗಾಗಿ ಇಂತಹ ಗೇಮ್ಗಳ ಮೇಲೆ ಕಡಿವಾಣ ಬೀಳಬೇಕು'' ಎಂದು ಒತ್ತಾಯಿಸಿದ್ದಾರೆ.
''ಆನ್ಲೈನ್ ಆಟ 'game of skill-not a game of luck' ಎಂಬ ಆಧಾರದ ಮೇಲೆ ಕಾನೂನಿನ ಮಾನ್ಯತೆ ಪಡೆದುಕೊಂಡಿದೆ. ನಾನು ಈ ವಾದ ಒಪ್ಪುವುದಿಲ್ಲ ಎಂದು ಹೇಳಿರುವ ಅವರು, ನನ್ನ ಪ್ರಕಾರ ಹಣವನ್ನು ಬಾಜಿ ಕಟ್ಟಿ ಆಡುವುದು ಜೂಜು ಎಂಬುದು ನಿರ್ವಿವಾದ. ಇಂತಹ ಜೂಜಿಗೆ ವಿಶೇಷವಾಗಿ ಯುವಕರು ಆಕರ್ಷಿತರಾಗಿರುವುದು ದುರಂತ. ಸರ್ಕಾರ ಈ ಮನೆಹಾಳು ಗೇಮಿಂಗ್ಗಳ ಮೇಲೆ ನಿಷೇಧ ಹೇರಲಿ'' ಎಂದು ಆಗ್ರಹಿಸಿದ್ದಾರೆ.