ಕಾನ್ಪುರ, ನ. 16 (DaijiworldNews/MB) : ಪಾಕಿಸ್ತಾನಲ್ಲಿದ ಜೈಲಿನಲ್ಲಿದ್ದ ಕಾನ್ಪುರದ ವ್ಯಕ್ತಿಯೊಬ್ಬರು ಸುಮಾರು 28 ವರ್ಷಗಳ ಬಳಿಕ ಭಾರತಕ್ಕೆ ವಾಪಾಸ್ ಆಗಮಿಸಿದ್ದಾರೆ.
ಶಮ್ಸುದ್ದೀನ್ ಎಂಬವರು ಗೂಡಾಚರ್ಯೆ ಆರೋಪದಲ್ಲಿ ಪಾಕಿಸ್ತಾನದ ಜೈಲಿನಲ್ಲಿದ್ದರು. ಮನೆಯಲ್ಲಿ ಮನಸ್ತಾಪ ಉಂಟಾಗಿ 28 ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಶಮ್ಸುದ್ದೀನ್ ಪರಿಚಯಸ್ಥರ ಆಹ್ವಾನದ ಮೇರೆಗೆ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯೇ ಇದ್ದರು.
ಪೌರತ್ವ ಪಡೆಯುವ ನಿಟ್ಟಿನಲ್ಲಿ ನಕಲಿ ದಾಖಲೆಗಳನ್ನು ಮಾಡಿಸಿದ್ದ ಅವರು, ಬಳಿಕ ತನ್ನ ಕುಟುಂಬದವರನ್ನು ಕರೆಸಿ ಅಲ್ಲಿಯೇ ವ್ಯವಹಾರವನ್ನು ಪ್ರಾರಂಭಿಸಿದರು. ಕೆಲವು ವರ್ಷಗಳ ಬಳಿಕ ಶಮ್ಸುದ್ದೀನ್ ತನ್ನ ಕುಟುಂಬವನ್ನು ಭಾರತಕ್ಕೆ ವಾಪಾಸ್ ಕಳುಹಿಸಿದ್ದಾರೆ.
ಆದರೆ ತನ್ನ ಪಾಸ್ಪೋರ್ಟ್ ನವೀಕರಣ ಮಾಡಲು ಹೋದ ಸಂದರ್ಭದಲ್ಲಿ ಅವರು ಸಿಕ್ಕಿಬಿದ್ದಿದ್ದು ನಕಲಿ ದಾಖಲೆ ಹೊಂದಿದ್ದ ಕಾರಣ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅವರ ಶಿಕ್ಷೆ ಪೂರ್ಣವಾದ ಬಳಿಕ ಭಾರತೀಯ ಸೇನೆಯು ಅವರನ್ನು ವಶಕ್ಕೆ ಪಡೆದು ಕೊರೊನಾ ಮಾರ್ಗಸೂಚಿ ಪ್ರಕಾರ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿ ಇರಿಸಿದರು.
ಕೊನೆಗೆ ಭಾನುವಾರ ರಾತ್ರಿ ಕಾನ್ಪುರಕ್ಕೆ ಕರೆತರಲಾಗಿದ್ದು ಅವರ ಕುಟುಂಬದೊಂದಿಗೆ ಶಮ್ಸುದ್ದೀನ್ ಮಾತುಕತೆ ನಡೆಸಿದ ಬಳಿಕ ಪೊಲೀಸರು ನಿಯಮದಂತೆ ವಿಚಾರಣೆಗೆ ಕರೆದೊಯ್ದರು.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಿರಿಯ ಸಹೋದರ ಫಾಹಿಮ್, "ನಮಗೆ, ಅವನು ಹಿಂತಿರುಗಿರುವುದು ಮುಖ್ಯ. ಹಿಂದೆ ನಡೆದಿರುವುದನ್ನು ಮರೆತು ಹೊಸ ಜೀವನ ಆರಂಭಿಸಬೇಕು" ಎಂದು ಹೇಳಿದರು.