ಗುವಾಹತಿ, ನ. 16 (DaijiworldNews/MB) : ಸುಮಾರು 173 ದಿನಗಳ ಹಿಂದೆ ಅಸ್ಸಾಂನ ತೀನ್ಸುಕಿಯಾ ಜಿಲ್ಲೆಯ ಬಾಗ್ಜಾನ್ ತೈಲ ಕ್ಷೇತ್ರದ 5ನೇ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಈ ಬೆಂಕಿಯನ್ನು ಐದು ತಿಂಗಳ ಹರಸಾಹಸದಿಂದ ಆರಿಸುವಲ್ಲಿ ತಜ್ಞರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆಯಿಲ್ ಇಂಡಿಯಾ ಲಿಮಿಟೆಡ್, ಬಾಗ್ಜಾಜ್ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲಾಗಿದೆ. ಬ್ರೈನ್ ಸೊಲ್ಯೂಶನ್ ಮೂಲಕ ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ. ಪ್ರಸ್ತುತ ಬಾವಿಯಲ್ಲಿ ಯಾವುದೇ ಒತ್ತಡ ಇಲ್ಲ. ಹಾಗೆಯೇ ಅನಿಲ ಹೊರಸೂಸುವಿಕೆ ಮತ್ತು ಒತ್ತಡ ಉಂಟಾಗುವುದರ ಬಗ್ಗೆ ಪರಿಶೀಲನೆ ನಡೆಸಲು ಮುಂದಿನ 24 ಗಂಟೆ ಕಾಲ ಸಂಪೂರ್ಣ ನಿಗಾ ವಹಿಸಲಾಗುವುದು ಎಂದು ತಿಳಿಸಿದೆ.
ಎಂಟು ಮಂದಿ ವಿದೇಶಿ ತಜ್ಞರ ನೇತೃತ್ವದ ತಂಡವು ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದ್ದು ಇದಕ್ಕೆ ಓಐಎಲ್ನ ವಿಕೋಪಾ ನಿರ್ವಹಣಾ ತಂಡ ಸಹಕಾರ ನೀಡಿತ್ತು.
ಓಐಎಲ್ ಈ ಬೆಂಕಿ ನಂದಿಸುವ ಕಾರ್ಯಕ್ಕಾಗಿ 60 ಟನ್ ಸಾಧನಗಳನ್ನು ಕೆನಡಾದಿಂದ ಆಮದು ಮಾಡಿಕೊಂಡಿತ್ತು. ಹಾಗೆಯೇ ಈ ತಂಡವು ತೈಲ ಬಾವಿಯನ್ನು ನಿಷ್ಕ್ರೀಯ ಮಾಡಲು ಕೃತಲ ಕೆಸರನ್ನು ಅಧಿಕ ಒತ್ತಡದಿಂದ ಬಾವಿಗೆ ಸುರಿದಿದೆ. ಪ್ರಸ್ತುತ ತೈಲಬಾವಿ ರದ್ದು ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಅಂತಿಮ ಕಾರ್ಯಚರಣೆಯಲ್ಲಿ ಸಿಂಗಾಪುರ ಅಲರ್ಟ್ ಡಿಸಾಸ್ಟರ್ ಕಂಟ್ರೋಲ್ ಸಂಸ್ಥೆಯ ತಂಜ್ಞರು ನಡೆಸುತ್ತಿದ್ದಾರೆ.
ಅಸ್ಸಾಂನ ತೀನ್ಸುಕಿಯಾ ಜಿಲ್ಲೆಯ ಬಾಗ್ಜಾನ್ ತೈಲ ಕ್ಷೇತ್ರದ 5ನೇ ಬಾವಿಯಲ್ಲಿ ಮೇ 27 ರ ಸುಮಾರಿಗೆ ಅನಿಮಂತ್ರಿತವಾಗಿ ಅನಿಲ ಹೊರ ಬರಲಾರಭಿಸಿದ್ದು ಜೂನ್ 9 ರಂದು ಬೆಂಕಿ ಕಾಣಿಸಿಕೊಂಡಿತ್ತು. ಈ ಅವಘಡದಲ್ಲಿ ಓರ್ವ ಅಗ್ನಿ ಶಾಮಕ ದಳ ಸಿಬ್ಬಂದಿ ಜೀವಂತ ದಹನವಾಗಿದ್ದರು.