ಪಾಟ್ನಾ, ನ. 16 (DaijiworldNews/MB) : ಬಿಹಾರದಲ್ಲಿ ನೂತನ ಮುಖ್ಯಮಂತ್ರಿಯಾಗಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಜೆಡಿಯು ಮುಖಂಡ ನಿತೀಶ್ ಕುಮಾರ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಅವರು ಭಾನುವಾರ ತಿಳಿಸಿದ್ದಾರೆ. ಈ ನಡುವೆ ಈಗಾಗಲೇ ಉಪಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಶುರುವಾಗಿದೆ.
ಕರ್ನಾಟಕದಲ್ಲಿ ಇರುವಂತೆ ಬಿಹಾರದಲ್ಲೂ ಎರಡೆರಡು ಡಿಸಿಎಂ ಹುದ್ದೆ ಸೃಷ್ಟಿಸುವ ಸಂಭವವಿದ್ದು ರೇಣುದೇವಿ, ತಾರ್ಕಿಶೋರ್ ಪ್ರಸಾದ್ ಡಿಸಿಎಂಗಳಾಗುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಭಾನುವಾರ ಎನ್ಡಿಎ ಕೂಟದಿಂದ ನಡೆದ ಮುಖ್ಯಮಂತ್ರಿ ಸಭೆಯಲ್ಲಿ ನಿತೀಶ್ ಕುಮಾರ್ ಅವರ ಮಿತ್ರಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಕತಿಹಾರ್ ಶಾಸಕ ತಾರ್ಕಿಶೋರ್ ಪ್ರಸಾದ್ ಶಾಸಕಾಂಗ ಪಕ್ಷದ ಕ್ರಮವಾಗಿ ನಾಯಕ ಮತ್ತು ಬೆಟ್ಟಯ್ಯ ಶಾಸಕ ರೇಣು ದೇವಿ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು ಬಿಹಾರದಲ್ಲಿ ಇಬ್ಬರು ಡಿಸಿಎಂಗಳು ಇರಲಿದ್ದಾರೆ ಎನ್ನಲಾಗಿದೆ.
ನವೆಂಬರ್ 10 ರಂದು ಆರಂಭವಾದ ಬಿಹಾರ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಸತತ 19 ಗಂಟೆಗಳ ಬಳಿಕ ಮುಗಿದ್ದಿದ್ದು ನಿತೀಶ್ ಕುಮಾರ್ ನೇತೃತ್ವದ ಬಿಜೆಪಿಯನ್ನು ಒಳಗೊಂಡ ಎನ್ಡಿಎ ಕೂಟವು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದು ಬಿಹಾರವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿತ್ತು. ಎನ್ಡಿಎ ಕೂಟದಲ್ಲಿರುವ ಬಿಜೆಪಿ 74, ಜೆಡಿಯು 43, ವಿಐಪಿ 4, ಎಚ್ಎಎಂ 4 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು.