ಮುಂಬೈ, ನ. 15 (DaijiworldNews/MB) : ಮಹಾರಾಷ್ಟ್ರದಲ್ಲಿ ಧಾರ್ಮಿಕ ಕೇಂದ್ರಗಳನ್ನು ಮತ್ತೆ ತೆರೆಯುವುದಕ್ಕೆ ಅನುಮತಿ ನೀಡಿರುವುದು ಹಿಂದುತ್ವದ ವಿಜಯ ಎಂದು ಹೇಳಲಾಗುತ್ತಿರುವುದರ ವಿರುದ್ದ ತೀವ್ರ ವಾಗ್ದಾಳಿ ಶಿವಸೇನೆ ಸಂಸದ ಸಂಜಯ್ ರಾವತ್, ''ಪೂಜಾ ಸ್ಥಳಗಳನ್ನು ಮುಚ್ಚುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತೆಗೆದುಕೊಂಡಿದ್ದಾರೆ. ಇದಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ. ಇದು ಹಿಂದುತ್ವದ ಜಯವಲ್ಲ'' ಎಂದು ಹೇಳಿದ್ದಾರೆ.
ಭಾನುವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಲಾಕ್ಡೌನ್ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು. ದೇವಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಸಹ ಅವರು ತೆಗೆದುಕೊಂಡಿದ್ದು. ಕೊರೊನಾದ ನಡುವೆ ಪ್ರಧಾನಿ ಈ ನಿರ್ಧಾರ ಕೈಗೊಂಡಿರುವಾಗ ಈ ಮತ್ತೆ ಧಾರ್ಮಿಕ ಕೇಂದ್ರ ಆರಂಭಕ್ಕೆ ಬಿಜೆಪಿಯು ಹಿಂದುತ್ವದ ಹಣೆಪಟ್ಟಿ ಕಟ್ಟಬೇಕಾಗಿಲ್ಲ" ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ರಾಮ್ ಕದಮ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಶನಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರು ಸೋಮವಾರದಿಂದ ರಾಜ್ಯಾದ್ಯಂತ ಪೂಜಾ ಸ್ಥಳಗಳನ್ನು ಪುನಃ ತೆರೆಯಲು ಅನುಮತಿ ನೀಡುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದರು.
ಕೇಂದ್ರವು ಬಿಡುಗಡೆ ಮಾಡಿದ ಅನ್ಲಾಕ್ 1 ರ ಮಾರ್ಗಸೂಚಿಯಲ್ಲಿ ಪೂಜಾ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ ಪ್ರಸ್ತುತವೂ ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಅನ್ಲಾಕ್ 1 ರ ಸಂದರ್ಭದಲ್ಲೂ ಅಧಿಕ ಕೊರೊನಾ ಪ್ರಕರಣಗಳು ಇದ್ದ ಕಾರಣ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಮಹಾರಾಷ್ಟ್ರ ಸರ್ಕಾರ ಅವಕಾಶ ನೀಡಿರಲಿಲ್ಲ. ಶನಿವಾರ ಸರ್ಕಾರ ಈ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದು ಧಾರ್ಮಿಕ ಕೇಂದ್ರ ತೆರೆಯಲು ಅವಕಾಶ ಕಲ್ಪಿಸಿದೆ.
ಮಹಾರಾಷ್ಟ್ರದಲ್ಲಿ 17,44,698 ಕೊರೊನಾ ಪ್ರಕರಣಗಳು ದಾಖಲಾಗಿದ್ದು 16,123,14 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 86,000 ಪ್ರಕರಣಗಳು ಸಕ್ರಿಯವಾಗಿದ್ದು ಈವರೆಗೆ 45,914 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.