ಶ್ರೀನಗರ, ನ. 15 (DaijiworldNews/MB) : ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ)ಯಲ್ಲಿ ಶುಕ್ರವಾರ ಪಾಕಿಸ್ತಾನ ನಡೆಸಿದ ದಾಳಿಯ ವೇಳೆ ಪಾಕಿಸ್ತಾನ ಪಡೆಯು ಭಾರಿ ಪ್ರಮಾಣದ ತೋಪುಗಳನ್ನು ಬಳಸಿತ್ತು ಎಂದು ಹಿರಿಯ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಅಧಿಕಾರಿಯೊಬ್ಬರು ಭಾನುವಾರ ಹೇಳಿದರು.
ಮೃತ ಬಿಎಸ್ಎಫ್ ಸಬ್ಇನ್ಸ್ಪೆಕ್ಟರ್ ರಾಕೇಶ್ ದೋವಲ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದ ಬಿಎಸ್ಎಫ್ ಇನ್ಸ್ಪೆಕ್ಟರ್ ಜನರಲ್ (ಕಾಶ್ಮೀರ) ರಾಜೇಶ್ ಮಿಶ್ರಾ, ''ಯಾವುದೇ ಪ್ರಚೋಧನೆ ಇಲ್ಲದೆಯೇ ಪಾಕಿಸ್ತಾನ ಪಡೆಯು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಳಸಿದ್ದರು. ಅವರು ಭಾರಿ ಪ್ರಮಾಣದ ತೋಪುಗಳನ್ನು ಕೂಡಾ ಬಳಸಿದ್ದು ಈ ಕಾರಣದಿಂದಾಗಿ ಭಾರತದ ಭಾಗದ ಹಳ್ಳಿಗಳಲ್ಲಿ ಹೆಚ್ಚಿನ ಪ್ರಾಣಹಾನಿಯಾಗಿದೆ. ಹಾಗೆಯೇ ಆಸ್ತಿಗಳು ನಾಶವಾಗಿದೆ'' ಎಂದು ತಿಳಿಸಿದ್ದಾರೆ.
''ಪಾಕಿಸ್ತಾನದ ಈ ಅಪ್ರಚೋದಿತ ದಾಳಿಗೆ ನಮ್ಮ ಯೋಧರು ಹಾಗೂ ಬಿಎಸ್ಎಫ್ ಸಿಬ್ಬಂದಿಗಳು ತಕ್ಕ ಉತ್ತರ ನೀಡಿದ್ದಾರೆ. ಪಾಕ್ನ ಹಲವು ಬಂಕರ್ಗಳು ನಾಶವಾಗಿದೆ ಎಂದು ಹೇಳಿದ ಅವರು, ಈ ಕೃತ್ಯದ ಸಂದರ್ಭ ಸುಮಾರು 250–300 ಉಗ್ರರು ಗಡಿ ದಾಟಿ ಒಳನುಸುಳಲು ಮುಂದಾಗಿದ್ದರು. ಆದರೆ ಈ ಪ್ರಯತ್ನವನ್ನು ಕೂಡಾ ಭಾರತೀಯ ಸೇನೆಯು ವಿಫಲಗೊಳಿಸಿದೆ'' ಎಂದು ಹೇಳಿದರು.
''ಇನ್ನು ಪಾಕಿಸ್ತಾನದ ಈ ಕೃತ್ಯದಿಂದಾಗಿ ನಾಗರಿಕರು ಪ್ರಾಣ ಕಳೆದುಕೊಂಡಿರುವುದನ್ನು ಮತ್ತು ಆಸ್ತಿ ಪಾಸ್ತಿಗೆ ಉಂಟಾಗಿರುವ ಹಾನಿಯ ಬಗ್ಗೆ ಮಾನವ ಹಕ್ಕುಗಳ ರಕ್ಷಣೆ ಸಂಸ್ಥೆಗಳು ಗಮನಿಸಬೇಕು'' ಎಂದರು.
ಜಮ್ಮು ಕಾಶ್ಮೀರದಲ್ಲಿ ಶುಕ್ರವಾರ ಪಾಕಿಸ್ತಾನ ಪಡೆಯ ಅಪ್ರಚೋದಿತ ದಾಳಿಯಿಂದಾಗಿ ಐವರು ಯೋಧರು ಸೇರಿದಂತೆ 11 ಮಂದಿ ಹುತಾತ್ಮರಾಗಿದ್ದಾರೆ. ಈ ವೇಳೆ ಭಾರತ ಸೇನೆಯು ಪ್ರತಿದಾಳಿ ನಡೆಸಿದ್ದು 11 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ಪಾಕ್ನಲ್ಲಿರುವ ಭಾರತೀಯ ರಾಯಭಾರಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ. ಶನಿವಾರ ಭಾರತೀಯ ವಿದೇಶಾಂಗ ಸಚಿವಾಲಯವು ಕೂಡಾ ಸಮನ್ಸ್ ಜಾರಿ ಮಾಡಿದೆ.