ಪಾಟ್ನಾ, ನ. 15 (DaijiworldNews/MB) : ಬಿಹಾರದಲ್ಲಿ ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜೆಡಿಯು ಮುಖಂಡ ನಿತೀಶ್ ಕುಮಾರ್ ಸೋಮವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಚುನಾವಣೆಯಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಎನ್ಡಿಎ ಕೂಟ ಭಾನುವಾರ ಬಿಹಾರದ ಮುಂದಿನ ಮುಖ್ಯಮಂತ್ರಿ ಆಯ್ಕೆಗಾಗಿ ಸಭೆ ನಡೆಸಿದ್ದು ಈ ಸಭೆಯಲ್ಲಿ ಮತ್ತೆ ನಿತೀಶ್ ಕುಮಾರ್ ಅವರನ್ನೇ ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್, ''ನನ್ನ ನೇತೃತ್ವದಲ್ಲಿ ಬಿಹಾರದಲ್ಲಿ ಸರ್ಕಾರ ರಚನೆಯಾಗಲಿದೆ. ಸೋಮವಾರ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ'' ಎಂದು ತಿಳಿಸಿದ್ದಾರೆ.
ನವೆಂಬರ್ 10 ರಂದು ಆರಂಭವಾದ ಬಿಹಾರ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಸತತ 19 ಗಂಟೆಗಳ ಬಳಿಕ ಮುಗಿದ್ದಿದ್ದು ನಿತೀಶ್ ಕುಮಾರ್ ನೇತೃತ್ವದ ಬಿಜೆಪಿಯನ್ನು ಒಳಗೊಂಡ ಎನ್ಡಿಎ ಕೂಟವು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದು ಬಿಹಾರವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ-ಕಾಂಗ್ರೆಸ್ ಹಾಗೂ ಇತರ ಮೂರು ಪಕ್ಷಗಳನ್ನು ಒಳಗೊಂಡ ಮಹಾಘಟ ಬಂಧನ್ 110 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.