ಪಾಟ್ನಾ, ನ. 15 (DaijiworldNews/MB) : ಜೆಡಿ (ಯು) ಮುಖ್ಯಸ್ಥರಾದ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಮತ್ತೆ ಆಯ್ಕೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಮೂಲಕ ನಿತೀಶ್ ಕುಮಾರ್ ಅವರು ಸತತ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಚುನಾವಣೆಯಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಎನ್ಡಿಎ ಕೂಟ ಭಾನುವಾರ ಬಿಹಾರದ ಮುಂದಿನ ಮುಖ್ಯಮಂತ್ರಿ ಆಯ್ಕೆಗಾಗಿ ಸಭೆ ನಡೆಸಿದ್ದು ಈ ಸಭೆಯಲ್ಲಿ ಮತ್ತೆ ನಿತೀಶ್ ಕುಮಾರ್ ಅವರನ್ನೇ ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ನವೆಂಬರ್ 10 ರಂದು ಆರಂಭವಾದ ಬಿಹಾರ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಸತತ 19 ಗಂಟೆಗಳ ಬಳಿಕ ಮುಗಿದ್ದಿದ್ದು ನಿತೀಶ್ ಕುಮಾರ್ ನೇತೃತ್ವದ ಬಿಜೆಪಿಯನ್ನು ಒಳಗೊಂಡ ಎನ್ಡಿಎ ಕೂಟವು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದು ಬಿಹಾರವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿತ್ತು. ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ-ಕಾಂಗ್ರೆಸ್ ಹಾಗೂ ಇತರ ಮೂರು ಪಕ್ಷಗಳನ್ನು ಒಳಗೊಂಡ ಮಹಾಘಟ ಬಂಧನ್ 110 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.
ಎನ್ಡಿಎ ಕೂಟದಲ್ಲಿರುವ ಬಿಜೆಪಿ 74, ಜೆಡಿಯು 43, ವಿಐಪಿ 4, ಎಚ್ಎಎಂ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಒಟ್ಟು 125 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದು ಮಹಾಘಟ ಬಂಧನ್ ಮೈತ್ರಿಕೂಟದ ಆರ್ಜೆಡಿ 75, ಕಾಂಗ್ರೆಸ್ 19, ಎಡಪಕ್ಷಗಳು 16 ಕಡೆ ಗೆಲುವು ಸಾಧಿಸಿ ಒಟ್ಟು 110 ಸ್ಥಾನ ಗಳಿಸಿತ್ತು. ಆರ್ಜೆಡಿಯು 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಲಭಿಸದಿದ್ದರೂ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಇನ್ನು ನಿತೀಶ್ ಕುಮಾರ್ ಮುಖ್ಯಸ್ಥರಾಗಿರುವ ಜೆಡಿಯು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮತ್ತೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗುತ್ತಾರಾ ಎಂಬ ಬಗ್ಗೆ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿದ್ದವು. ಈ ನಡುಗೆ ವಿಪಕ್ಷಗಳು ಆರ್ಜೆಡಿಯ ವಿರುದ್ದ ನಿತೀಶ್ ಮುಖ್ಯಮಂತ್ರಿಯಾಗುವ ವಿಚಾರದಲ್ಲಿ ವಾಗ್ದಾಳಿಯನ್ನು ಕೂಡಾ ನಡೆಸಿದ್ದವು. ಅಷ್ಟೇ ಅಲ್ಲದೇ ಕಾಂಗ್ರೆಸ್ ಮುಖಂಡರು ದಿಗ್ವಿಜಯ್ಸಿಂಗ್, ಬಿಜೆಪಿ ಮೈತ್ರಿ ತೊರೆದು, ಜಾತ್ಯಾತೀಯ ಶಕ್ತಿಗಳ ಜೊತೆ ಸೇರಿ ನಾಯಕತ್ವ ವಹಿಸಿಕೊಳ್ಳಿ ಎಂದು ನಿತೀಶ್ಗೆ ಆಹ್ವಾನವನ್ನು ಕೂಡಾ ನೀಡಿದ್ದರು. ವಂಚನೆ, ಹಣ, ತೋಳ್ಬಲದಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಗೆ ಜಯ ಎಂದು ರಾಷ್ಟ್ರೀಯ ಜನತಾ ದಳದ ಮುಖಂಡ ತೇಜಸ್ವಿ ಯಾದವ್ ಆರೋಪ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆಯ ನಡುವೆ ಶುಕ್ರವಾರ ರಾಜ್ಯಪಾಲ ಫಗು ಚೌಹಾಣ್ ಅವರನ್ನು ಭೇಟಿಯಾದ ನಿತೀಶ್ ಕುಮಾರ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಭಾನುವಾರ ಎನ್ಡಿಎ ಕೂಟವು ಬಿಹಾರದ ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಸಭೆ ನಡೆಸಿದ್ದು ಮುಂದಿನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರನ್ನು ಸಭೆಯು ಆಯ್ಕೆ ಮಾಡಿದೆ.