ಬೆಂಗಳೂರು, ನ. 15 (DaijiworldNews/MB) : ಜ್ಯೋತಿಷಿಯೊಬ್ಬರು ಹೇಳಿದ ಭವಿಷ್ಯ ಕೇಳಿ ಪತಿ ಮತ್ತು ಪತಿಯ ಮನೆಯವರು ಕಿರುಕುಳ ನೀಡಿದ ಕಾರಣದಿಂದಾಗಿ ಮದುವೆಯಾದ ಕೇವಲ ಒಂಬತ್ತು ತಿಂಗಳ ನಂತರ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಅಶ್ವಿನಿ (25) ಎಂದು ಗುರುತಿಸಲಾಗಿದೆ. ಪತಿ ಯುವರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜು ದಿನಗಳಿಂದಲ್ಲೇ ಯುವರಾಜ್ ಅಶ್ವಿನಿಯನ್ನು ಪ್ರೀತಿಸುತ್ತಿದ್ದು ಆಕೆಯ ಬಳಿ ವಿವಾಹವಾಗುವಂತೆ ಕೇಳಿದ್ದ. ತಂದೆಯನ್ನು ಕಳೆದುಕೊಂಡಿರುವ ಅಶ್ವಿನಿ ತನ್ನ ತಾಯಿಯ ಒಪ್ಪಿಗೆ ಪಡೆದು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಈ ಜೋಡಿಯ ವಿವಾಹ ನಡೆದಿದೆ.
ದಂಪತಿಗಳು ಸುಮಾರು ಎರಡು ತಿಂಗಳು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಯುವರಾಜ್ ತನ್ನ ಕೆಲಸವನ್ನು ಕಳೆದುಕೊಂಡು ತನ್ನ ಸ್ನೇಹಿತರೊಂದಿಗೆ ಸುತ್ತಾಡಲು ಆರಂಭಿಸಿದ್ದನು. ಈ ವಿಚಾರಕ್ಕೆ ಸಂಬಂಧಿಸಿ ದಂಪತಿಗಳ ನಡುವೆ ಬಿರುಕು ಉಂಟಾಗಿತ್ತು ಎಂದು ಹೇಳಲಾಗಿದೆ. ಅಶ್ವಿನಿ ಕೆಲಸ ಮಾಡುತ್ತಿದ್ದು ಅವಳ ಸಂಬಳದಿಂದಲ್ಲೇ ಮನೆ ನಿಭಾಯಿಸಬೇಕಿತ್ತು ಎನ್ನಲಾಗಿದೆ.
ಈ ಮಧ್ಯೆ, ಯುವರಾಜ್ ಅವರ ಕುಟುಂಬ ಸದಸ್ಯರು ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿದ್ದು ಜ್ಯೋತಿಷಿಯು ಅಶ್ವಿನಿ ಎಂದಿಗೂ ಮಕ್ಕಳನ್ನು ಹೆರುವುದಿಲ್ಲ ಎಂದು ಭವಿಷ್ಯ ನುಡಿದರು. ಜ್ಯೋತಿಷಿಯ ಮಾತುಗಳನ್ನು ಕೇಳಿದ ಯುವರಾಜ್ ಹಾಗೂ ಆತನ ಕುಟುಂಬಸ್ಥರು ಅಶ್ವಿನಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಹಾಗೆಯೇ ಯುವರಾಜ್ ತನಗೆ ಹೆಚ್ಚಿನ ವರದಕ್ಷಿಣೆ ನೀಡುವಂತೆ ಹಾಗೂ ದುಬಾರಿ ಮೊಬೈಲ್ ಫೋನ್ ಖರೀದಿ ಮಾಡಿ ಕೊಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಸಾಲ ಮಾಡಿಯಾದರೂ ತನಗೆ ವರದಕ್ಷಿಣೆ ಹಾಗೂ ಮೊಬೈಲ್ ಫೋನ್ ನೀಡಬೇಕೆಂದು ಒತ್ತಡ ಹೇರುತ್ತಿದ್ದನು ಎನ್ನಲಾಗಿದೆ.
ನವೆಂಬರ್ 13 ರ ಶುಕ್ರವಾರ ರಾತ್ರಿ ದಂಪತಿಗಳ ನಡುವೆ ಈ ವಿಚಾರವಾಗಿ ವಾಗ್ವಾದ ನಡೆದಿದ್ದು ನವೆಂಬರ್ 14 ರ ಶನಿವಾರ ಬೆಳಿಗ್ಗೆ ಯುವರಾಜ್ ಅಶ್ವಿನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ನಂತರ ಅಶ್ವಿನಿ ತನ್ನ ಸಹೋದರಿ ವರ್ಷಿನಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದು ಸ್ವಲ್ಪ ಸಮಯದ ಬಳಿಕ ಯುವರಾಜ್ ತನ್ನ ಸಂಬಂಧಿಕರಿಗೆ ಕರೆ ಮಾಡಿ ಅಶ್ವಿನಿ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ತಿಳಿಸಿದರು. ತಾಯಿ ಮತ್ತು ಸಹೋದರಿ ಆಸ್ಪತ್ರೆಗೆ ತಲುಪುವ ಮೊದಲು, ಅಶ್ವಿನಿ ಕೊನೆಯುಸಿರೆಳೆದಿದ್ದಾಳೆ.
ಜ್ಯೋತಿಷಿಯ ಮಾತು ಕೇಳಿ ಯುವರಾಜ್ ಅಶ್ವಿನಿ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಅಶ್ವಿನಿಯ ಕುಟುಂಬ ಸದಸ್ಯರು ಆರೋಪಿಸಿದರು. ಅಶ್ವಿನಿ ಅವರ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.
ಅಶ್ವಿನಿ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಹೇಳಲಾಗಿದೆ. ಆದರೆ ಆಕೆಯನ್ನು ಹತ್ಯೆಗೈದು ನೇಣಿಗೇರಿಸಿ ಆತ್ಮಹತ್ಯೆಯಂತೆ ಬಿಂಬಿಸಲಾಗಿದೆ ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮರಣೋತ್ತರ ವರದಿ ಲಭ್ಯವಾದ ನಂತರವೇ ಈ ಬಗ್ಗೆ ಸ್ಪಷ್ಟತೆ ದೊರೆಯಲಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.