ತಿರುವನಂತಪುರ, ನ. 15 (DaijiworldNews/MB) : ಈ ವರ್ಷದ ಮಂಡಲ ಪೂಜಾ ಉತ್ಸವಕ್ಕಾಗಿ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಭಾನುವಾರ ತೆರೆಯಲಿದ್ದು ನಾಳೆಯಿಂದ ಯಾತ್ರಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇಂದು ಸಂಜೆ 5 ಗಂಟೆಗೆ ದೇವಸ್ಥಾನದ ಮುಖ್ಯ ಅರ್ಚಕ ಎ ಕೆ ಸುದೀರ್ ನಂಬೂದರಿ ಅವರು ದೇವಸ್ಥಾನದ ಗರ್ಭಗುಡಿಯನ್ನು ತಂತ್ರಿಗಳಾದ ಕಂಡರಾರು ರಾಜೀವರು ಅವರ ಸಮ್ಮುಖದಲ್ಲಿ ತೆರೆಯಲಿದ್ದು ಶಬರಿಮಲೆಯ ನೂತನ ಮುಖ್ಯ ಅರ್ಚಕ ವಿ ಕೆ ಜಯರಾಜ್ ಪೊಟ್ಟಿ ಮತ್ತು ಮಲಿಕಾಪ್ಪುರಂ ಮುಖ್ಯ ಅರ್ಚಕ ಎಂ ಎನ್ ರಾಜಿಕುಮಾರ್ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಸಾಂಪ್ರದಾಯಿಕ ಪೂಜೆಗಳು ನಡೆದ ಬಳಿಕ ಸ್ಥಳೀಯ ದೇವಸ್ಥಾನದ ಸಿಬ್ಬಂದಿಗಳು ದರ್ಶನ ಪಡೆಯಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಮುಜರಾಯಿ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರು, ''ನಾಳೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಕೊರೊನಾ ಕಾರಣದಿಂದಾಗಿ ದಿನಕ್ಕೆ ಸಾವಿರ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಭಕ್ತರಿಗೆ ಅವಕಾಶ ಮಾಡಿಕೊಡಲಾಗುವುದು. ಹೈಕೋರ್ಟ್ ಆದೇಶದಂತೆ 750 ಯಾತ್ರಿಕರಿಗೆ ಕಡಿಮೆ ದಿನಗಳಿಗೆ ನಿಲಕ್ಕಲ್ನಲ್ಲಿ ತಂಗಲು ಸೌಕರ್ಯವಿದೆ. ಆದರೆ ಪಂಪಾ ಮತ್ತು ಸನ್ನಿದಾನದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಅವಕಾಶವಿಲ್ಲ'''ಎಂದು ತಿಳಿಸಿದ್ದಾರೆ.
ದೇವಸ್ಥಾನಕ್ಕೆ ತೆರಳುವ 1 ದಿನಕ್ಕೂ ಮುನ್ನಾ ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಬಂದಲ್ಲಿ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿದೆ. 60 ರಿಂದ 65 ವರ್ಷದೊಳಗಿನವರು ದೇವಸ್ಥಾನಕ್ಕೆ ಹೋಗಬೇಕಾದರೆ ವೈದ್ಯಕೀಯ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ.