ಮಂಡ್ಯ, ನ. 15 (DaijiworldNews/MB) : ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಟೀಕಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವು ಸುಮಲತಾ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, "ಆ ಯಮ್ಮಾ (ಸುಮಲತಾ) ಯಾವುದೇ ಕೆಲಸ ಮಾಡುವುದಿಲ್ಲ. ಮಂಡ್ಯಕ್ಕೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೆ ಹೇಳಿ" ಎಂದು ಕರೆಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸುಮಲತಾ ಅವರ ಬೆಂಬಲಿಗರು ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ನವೆಂಬರ್ 12 ರ ಗುರುವಾರ ಬೆಂಗಳೂರಿಗೆ ತೆರಳುತ್ತಿದ್ದಾಗ, ಯಲಿಯೂರು ಗೇಟ್ ಸರ್ಕಲ್ ಬಳಿ ಸುತ್ತಮುತ್ತಲಿನ ಗ್ರಾಮಸ್ಥರು ಸಾರ್ವಜನಿಕರ ಅನುಕೂಲಕ್ಕಾಗಿ ಕೆಳಸೇತುವೆ ನಿರ್ಮಿಸುವಂತೆ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಿದರು. ಈ ವಿಷಯವನ್ನು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಕರೆ ಮಾಡಿ ಮಾತನಾಡುತ್ತಿರುವಾಗ ಸಂಸದ ಪ್ರತಾಪ್ ಸಿಂಹ ಸುಮಾಲತಾ ಅವರನ್ನು ಲೇವಡಿ ಮಾಡಿದರು.
ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ, ಪ್ರತಾಪ್ ಸಿಂಹ ಅವರು, "ದೇವೇಗೌಡರ ಕುಟುಂಬವನ್ನು ಸೋಲಿಸುವ ಉದ್ದೇಶದಿಂದ ಮಂಡ್ಯದ ಜನರು ಸುಮಲತಾ ಅಂಬರೀಶ್ ಅವರಿಗೆ ಮತ ಹಾಕಿದ್ದಾರೆ. ಅವರು ಯಾವುದೇ ಕೆಲಸವನ್ನು ಮಾಡಲು ಬಿಡಲ್ಲ. ಮಂಡ್ಯಾಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೆ ಹೇಳಿ. ಆ ಯಮ್ಮಾ ಯಾವುದೇ ಕೆಲಸ ಮಾಡಲ್ಲ" ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರು-ಬೆಂಗಳೂರು 10 ಪಥದ ರಸ್ತೆ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸುಮಲತಾ ಅವರು ಯೋಜನಾ ಅಧಿಕಾರಿಯ ಬಳಿ ಪ್ರಶ್ನಿಸಿದ್ದರು. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿ ಪ್ರತಾಪ್ ಸಿಂಹ ಅವರಿಗೆ ದೂರು ನೀಡಿದ್ದರು. ಯೋಜನಾ ಅಧಿಕಾರಿಯ ದೂರಿಗೆ ಉತ್ತರ ನೀಡುವಾಗ ಪ್ರತಾಪ್ ಸಿಂಹ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸುಮಲತಾ ಅಂಬರೀಶ್ ಅವರ ಬೆಂಬಲಿಗರು ಹೇಳುತ್ತಾರೆ.