ನವದೆಹಲಿ, ನ. 14 (DaijiworldNews/MB) : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಯೋಧರು ಹಾಗೂ ಇತರರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿರುವ ಭಾರತ, ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿ ಉದ್ದಟತನ ತೋರಿದ ಪಾಕಿಸ್ತಾನದ ದುರ್ವತನೆಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವಾಲಯ, ''ಪಾಕಿಸ್ತಾನದ ಪಡೆಗಳು ಮುಗ್ಧ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿದೆ. ಇದನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಈ ಹಬ್ಬದ ಸಂದರ್ಭವನ್ನೇ ಬಳಸಿಕೊಂಡ ಪಾಕ್, ಗಡಿಯುದ್ದಕ್ಕೂ ಮುಗ್ಧ ನಾಗರೀಕರ ಮೇಲೆ ಶಸ್ತ್ರಾಸ್ತ್ರಗಳು ಹಾಗೂ ಶೆಲ್ ಗಳ ಮೂಲಕ ದಾಳಿ ನಡೆಸಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದ ಶಾಂತಿ ಕದಡಲು ಹಾಗೂ ಹಿಂಸಾಚಾರ ಸೃಷ್ಟಿಸಲು ಯತ್ನಿಸಿದೆ. ಇದು ಶೋಚನೀಯ ವಿಚಾರ'' ಎಂದು ಹೇಳಿದೆ.
ಹಾಗೆಯೇ ಈ ಘಟನೆಗೆ ಸಂಬಂಧಿಸಿ ಪಾಕಿಸ್ತಾನ ರಾಯಭಾರಿ ಅಧಿಕಾರಿಗೆ ಸಮನ್ಸ್ ಜಾರಿಗೊಳಿಸಲಾಗಿದ್ದು ಪ್ರತಿಭಟನೆ ವ್ಯಕ್ತಪಡಿಸಲಾಗಿದೆ ಎಂದು ತಿಳಿಸಿದೆ.
ಜಮ್ಮು ಕಾಶ್ಮೀರದಲ್ಲಿ ಶುಕ್ರವಾರ ಪಾಕಿಸ್ತಾನ ಪಡೆಯ ಅಪ್ರಚೋದಿತ ದಾಳಿಯಿಂದಾಗಿ ಐವರು ಯೋಧರು ಸೇರಿದಂತೆ 11 ಮಂದಿ ಹುತಾತ್ಮರಾಗಿದ್ದಾರೆ. ಈ ವೇಳೆ ಭಾರತ ಸೇನೆಯು ಪ್ರತಿದಾಳಿ ನಡೆಸಿದ್ದು 11 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ಪಾಕ್ನಲ್ಲಿರುವ ಭಾರತೀಯ ರಾಯಭಾರಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ. ಈಗ ಭಾರತೀಯ ವಿದೇಶಾಂಗ ಸಚಿವಾಲಯವು ಕೂಡಾ ಸಮನ್ಸ್ ಜಾರಿ ಮಾಡಿದೆ.