ಬೆಂಗಳೂರು, ನ. 14 (DaijiworldNews/MB) : ''ಪಂಡಿತ್ ಜವಾಹರಲಾಲ್ ನೆಹರೂ ಅವರ ಸಿದ್ದಾಂತ, ದೂರದೃಷ್ಟಿಯೇ ಭಾರತದ ಪ್ರಗತಿಯ ಮೂಲ. ಇದನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ'' ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ''ಕಾಂಗ್ರೆಸ್ ಪಕ್ಷದ ಇತಿಹಾಸವೇ ಈ ದೇಶದ ಇತಿಹಾಸ. ಆ ನಿಟ್ಟಿನಲ್ಲಿ ಬಿಜೆಪಿಯವರು ಭಾರತದ ಇತಿಹಾಸವನ್ನು ಬದಲಾಯಿಸುತ್ತೇವೆ ಎಂದು ಮುಂದಾದರೆ ಅದು ದೇಶಕ್ಕೆ ಆಗುವ ನಷ್ಟ. ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನವೇ ಭಾರತ ಸ್ವಾತಂತ್ಯ್ರದ ಇತಿಹಾಸ'' ಎಂದು ಹೇಳಿದರು.
''ನೆಹರೂರವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ಸ್ವಾತಂತ್ರ್ಯ ಚಳುವಳಿಗಾಗಿ ನೀಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಪ್ರಧಾನಿ ಹುದ್ದೆಗೆ ಜವಾಹರಲಾಲ್ ನೆಹರು ಅವರ ಹೆಸರನ್ನು ಸೂಚಿಸಿದ್ದರು. ಈ ಬಗ್ಗೆ ಪಟೇಲರೇ ಬರೆದಿರುವ ಪತ್ರಗಳ ದಾಖಲೆಯನ್ನು ಅವರ ಪುತ್ರಿ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಇತಿಹಾಸವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ'' ಎಂದು ಹೇಳಿದರು.