ವಿಜಯಪುರ, ನ. 14 (DaijiworldNews/MB) : ತಮ್ಮ ಪಕ್ಷವು "ಕಾರ್ಯಕರ್ತರಿಗೆ" ಸೇರಿದ್ದು "ರಾಜವಂಶಸ್ಥರಿಗೆ" ಅಲ್ಲ ಎಂದು ಕರ್ನಾಟಕ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಪಕ್ಷದ ಮುಖಂಡರಾದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಕಾಲೆಳೆದಿದ್ದಾರೆ.
ಫೇಸ್ಬುಕ್ನಲ್ಲಿ ಯತ್ನಾಳ್ ತಮ್ಮ ಪಕ್ಷವನ್ನು ಕಾರ್ಯಕರ್ತರು ಹೇಗೆ ನಿರ್ಮಿಸಿದ್ದಾರೆ ಎಂಬುದರ ಕುರಿತು ಕನ್ನಡದಲ್ಲಿ ಸುದೀರ್ಘವಾದ ಟಿಪ್ಪಣಿ ಬರೆದಿದ್ದಾರೆ. ಆದರೆ ಯಾವುದೇ ಒಂದು ನಿರ್ದಿಷ್ಟ ನಾಯಕರನ್ನು ಇಲ್ಲಿ ಹೆಸರಿಸಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಯತ್ನಾಳ್, "ನಮ್ಮ ನಾಯಕ (ಮೋದಿ) ದೇಶಾದ್ಯಂತ ರಾಜವಂಶದ ಶಕ್ತಿಗಳ ವಿರುದ್ಧ ಹಗಲು ರಾತ್ರಿ ಹೋರಾಡುತ್ತಿದ್ದಾರೆ. ಅವರು ನವದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜವಂಶಗಳು ಅಧಿಕಾರಕ್ಕೆ ಬರುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ'' ಎಂದು ಹೇಳಿದ್ದಾರೆ.
"ಕರ್ನಾಟಕದಲ್ಲಿ, ನಮ್ಮ ಪಕ್ಷ ಏಕೆ ರಾಜವಂಶಕ್ಕೆ ಸೇರಿದಂತಿದೆ. ನಮ್ಮ ಪಕ್ಷವು ರಾಜವಂಶಗಳಿಗೆ ಅಲ್ಲ, ಕಾರ್ಯಕರ್ತರಿಗೆ" ಎಂದು ಹೇಳಿದರು.
ಯಾವುದಕ್ಕೂ ಒಬ್ಬ ನಾಯಕನಿಗೆ ಮನ್ನಣೆ ನೀಡುವುದು ನಮ್ಮ ಪಕ್ಷದ ಲಕ್ಷಣವಲ್ಲ. ಇದು ಇತರ ಪಕ್ಷಗಳ ಲಕ್ಷಣವಾಗಿದೆ ಎಂದು ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷವನ್ನು ಹೆಸರಿಸದೆ ಹೇಳಿದರು.
"ಬಿಜೆಪಿ ಅತಿದೊಡ್ಡ ಶಕ್ತಿ ಪಡೆದಿರುವುದು ಒಬ್ಬ ನಾಯಕನಿಂದಲ್ಲ. ಬದಲಾಗಿ ಪಕ್ಷದ ಹಿತದೃಷ್ಟಿಯಿಂದ ಪಟ್ಟುಬಿಡದೆ ಕೆಲಸ ಮಾಡುವ ಲಕ್ಷಾಂತರ ಕಾರ್ಯಕರ್ತರಿಂದ. ನಾವು ಚುನಾವಣೆಯಲ್ಲಿ ಗೆದ್ದಾಗಲೆಲ್ಲಾ ನಾವು ನಮ್ಮ ಕಾರ್ಯಕರ್ತರಿಗೆ ಮನ್ನಣೆ ನೀಡಬೇಕು ಮತ್ತು ಅವರ ಕಾರ್ಯವನ್ನು ಸ್ಮರಿಸಬೇಕು, ಗೌರವಿಸಬೇಕು'' ಎಂದು ಅಭಿಪ್ರಾಯಪಟ್ಟಿದ್ದಾರೆ.
"ರಕ್ತ ಮತ್ತು ಬೆವರಿನ ಫಲವಾಗಿ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲುವು ಸಿಗುತ್ತದೆ. ಯಾವುದೇ ಒಬ್ಬ ನಾಯಕನಿಂದಾಗಿ ಅಲ್ಲ" ಎಂದು ಹೇಳುವ ಮೂಲಕ ವಿಜಯೇಂದ್ರ ಅವರ ಕಾಲೆಳೆದರು.