ಬೆಂಗಳೂರು, ನ. 14 (DaijiworldNews/MB) : ರಾಜ್ಯದ 13 ಜಿಲ್ಲೆಗಳಲ್ಲಿ ಸಂಭವಿಸಿದ ಬೆಳೆ ಮತ್ತು ಆಸ್ತಿಪಾಸ್ತಿ ಹಾನಿ ಪರಿಹಾರವಾಗಿ ಕೇಂದ್ರ ಸರ್ಕಾರ 557 ಕೋಟಿ ರೂ. ಅಲ್ಪ ಮೊತ್ತವನ್ನು ನೀಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಆರೋಪಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಜವಾಹರಲಾಲ್ ನೆಹರುರವರ 131 ನೇ ಹುಟ್ಟುಹಬ್ಬದಂದು ನೆಹರೂ ಅವರ ಪ್ರತಿಮೆಗೆ ಯಡಿಯೂರಪ್ಪನವರು ಮಾಲಾರ್ಪಣೆ ಮಾಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಕೇಂದ್ರವು ಒದಗಿಸಿದ ಎನ್ಡಿಆರ್ಎಫ್ ಪರಿಹಾರ ಕಡಿಮೆ ಎಂದು ಆರೋಪ ಕೇಳಿಬಂದಿದೆ. ಆದರೆ ಇದು ಪರಿಹಾರದ ಮೊದಲ ಕಂತು ಎಂದು ನಾವು ಭಾವಿಸುತ್ತೇವೆ. ಹೆಚ್ಚಿನ ಪರಿಹಾರ ನಿಧಿಗಳಿಗಾಗಿ ಪ್ರಯತ್ನಿಸುತ್ತೇನೆ. ಹೆಚ್ಚಿನ ಪರಿಹಾರ ಪಡೆಯುವ ವಿಶ್ವಾಸವಿದೆ'' ಎಂದು ಹೇಳಿದರು.
"ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳು ಒಂದೇ ಸಮಯದಲ್ಲಿ ಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೆಪಿಎಸ್ಸಿ ಪರೀಕ್ಷೆಗಳನ್ನು ಮುಂದೂಡಲು ವಿನಂತಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ತಿಳಿಸಿದರು.
ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಇತಿಹಾಸದಲ್ಲಿ ಮೊದಲ ಬಾರಿಗೆ ಜಯಗಳಿಸಿತು. ಚುನಾವಣೆ ಮುಗಿದ ಕೂಡಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಭೇಟಿಯಾಗಿದ್ದರು. ಈ ಭೇಟಿಯು ಹಲವು ವದಂತಿಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿಯವರು, ''ಕುಮಾರಸ್ವಾಮಿಯೊಂದಿಗೆ ಮಂಡ್ಯದ ಡಿಸಿಸಿ ಬ್ಯಾಂಕ್ ಬಗ್ಗೆ ಚರ್ಚಿಸಿದ್ದೇನೆ. ಈ ಭೇಟಿಗೆ ಬೇರೆ ಬಣ್ಣ ಹಚ್ಚುವುದು ಬೇಡ'' ಎಂದು ಹೇಳುವ ಮೂಲಕ ವರದಿಗಳಿಗೆ ತೆರೆ ಎಳೆದಿದ್ದಾರೆ.
ಜವಾಹರಲಾಲ್ ನೆಹರು ಬಗ್ಗೆ ಮಾತನಾಡಿದ ಬಿಎಸ್ವೈ, "ದೇಶ ಕಂಡ ಮಹಾನ್ ನಾಯಕರಲ್ಲಿ ನೆಹರೂ ಒಬ್ಬರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆ ಅಪಾರ. ಅವರು ಭಾರತದ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಅವರ ಜನ್ಮದಿನದಂದು ಅವರನ್ನು ಗೌರವಯುತವಾಗಿ ಸ್ಮರಿಸೋಣ" ಎಂದು ಹೇಳಿದರು.