ಚಿಕ್ಕಮಗಳೂರು, ನ.14 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದೀಪಾವಳಿಯ ಬಳಿಕ ದೆಹಲಿಗೆ ಭೇಟಿ ನೀಡಿ ವರಿಷ್ಠರನ್ನು ಭೇಟಿ ಮಾಡುತ್ತಾರೆ" ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಿನ ದೇವಿರಮ್ಮನ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಹಾರದ ವಿದ್ಯಾಮಾನಗಳಲ್ಲಿ ಪಕ್ಷದ ವರಿಷ್ಠರು ನಿರತರಾಗಿರುವುದರಿಂದ ಸಿಎಂ ಅವರಿಗೆ ದೆಹಲಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಸಿಎಂ ಬಿಎಸ್ವೈ ಅವರು ದೀಪಾವಳಿಯ ಬಳಿಕ ದೆಹಲಿಗೆ ಭೇಟಿ ನೀಡಿ ವರಿಷ್ಠರನ್ನು ಭೇಟಿ ಮಾಡುತ್ತಾರೆ. ದೀಪಾವಳಿ ಹಬ್ಬದ ನಂತರ ಸಂಪುಟ ವಿಸ್ತರಣೆ ಮಾಡುವ ಯೋಚನೆ ಹೊಂದಿದ್ದಾರೆ" ಎಂದರು.
ಚಿಕ್ಕಮಗಳೂರು ಜಿಲ್ಲೆಗೆ ಮಂತ್ರಿ ಸ್ಥಾನದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರ ಸಿಎಂ ಬಿಎಸ್ವೈ ಅವರಿಗೆ ಬಿಟ್ಟಿದ್ದು. ಇದರ ತೀರ್ಮಾನವನ್ನು ಸಿಎಂ ಅವರೇ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ನಾನೇನು ಹೇಳಲಾಗುವುದಿಲ್ಲ" ಎಂದು ತಿಳಿಸಿದರು.
ಮೂರು ರಾಜ್ಯಗಳ ಉಸ್ತುವಾರಿಯಾಗಿ ನೇಮಕಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಪಕ್ಷ ಈ ಉಸ್ತುವಾರಿಯನ್ನು ನೀಡಿದೆ. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇನೆ" ಎಂದರು.
ಅಯೋಧ್ಯೆಯಲ್ಲಿನ ದೀಪಾವಳಿ ಸಂಭ್ರಮಾಚರಣೆ ಬಗ್ಗೆ ಮಾತನಾಡಿದ ಅವರು, "500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತಮ ಕಾರ್ಯವನ್ನು ಕೈಗೊಂಡಿದ್ದಾರೆ. ಈ ಕಾರ್ಯವು ಒಂದು ಶುಭ ಸಂಕೇತವಾಗಿದೆ" ಎಂದು ತಿಳಿಸಿದರು.