ಶ್ರೀನಗರ, ನ. 14 (DaijiworldNews/MB) : ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಯೋಧರ ನಡುವೆ ಉಂಟಾಗುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿ ಆತಂಕ ವ್ಯಕ್ತಪಡಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ, ''ರಾಜಕೀಯ ಹಿತಾಸಕ್ತಿ ತೊರೆದು ಮಾತುಕತೆಗೆ ಮುಂದಾಗಿ'' ಎಂದು ಭಾರತ ಹಾಗೂ ಪಾಕಿಸ್ತಾನಕ್ಕೆ ಮನವಿ ಮಾಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶುಕ್ರವಾರ ಪಾಕಿಸ್ತಾನ ಪಡೆಯ ಅಪ್ರಚೋದಿತ ದಾಳಿಯಿಂದಾಗಿ ಐವರು ಯೋಧರು ಸೇರಿದಂತೆ 11 ಮಂದಿ ಹುತಾತ್ಮರಾಗಿದ್ದಾರೆ. ಈ ವೇಳೆ ಭಾರತ ಸೇನೆಯು ಪ್ರತಿದಾಳಿ ನಡೆಸಿದ್ದು 11 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಫ್ತಿ, ''ಗಡಿ ನಿಯಂತ್ರಣ ರೇಖೆಯಲ್ಲಿ ಎರಡೂ ಬದಿಗಳಲ್ಲಿ ಹೆಚ್ಚುತ್ತಿರುವ ಸಾವುನೋವುಗಳನ್ನು ನೋಡಿ ಬೇಸರವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಾಯಕತ್ವ ತಮ್ಮ ರಾಜಕೀಯ ಹಿತಾಸಕ್ತಿ ತೊರೆದು ಮಾತುಕತೆ ನಡೆಸಬೇಕು. ವಾಜಪೇಯಿ ಜಿ ಮತ್ತು ಮುಷರಫ್ ಸಹಾಬ್ ಒಪ್ಪಂದ ಮಾಡಿ ಜಾರಿಗೆ ತಂದ ಕದನ ವಿರಾಮವನ್ನು ಮರುಸ್ಥಾಪಿಸಲು ಈಗ ಉತ್ತಮ ಅವಕಾಶ'' ಎಂದು ಹೇಳಿದ್ದಾರೆ.