ಬೆಳಗಾವಿ, ನ.14 (DaijiworldNews/PY): "ಕೊರೊನಾ ಲಾಕ್ಡೌನ್ನಿಂದಾಗಿ ಇಲಾಖೆಗೆ ಹೆಚ್ಚಿನ ಹಾನಿಯಾಗಿದೆ. ಹಾಗಾಗಿ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ" ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಸ್ತುತ ಇಲಾಖೆಯಲ್ಲಿ ಸುಮಾರು 1.30 ಲಕ್ಷ ಸಿಬ್ಬಂದಿಗಳಿದ್ದು, ಅವರ ವೇತನಕ್ಕಾಗಿ ತಿಂಗಳಿಗೆ 325 ಕೋಟಿ. ರೂ ಬೇಕಾಗುತ್ತದೆ. ಲಾಕ್ಡೌನ್ ಜಾರಿಯಲ್ಲಿದ್ದ ಸಂದರ್ಭ ಎರಡು ತಿಂಗಳು ನೌಕರರಿಗೆ ಸಂಬಳ ನೀಡಿದ್ದೇವೆ" ಎಂದು ತಿಳಿಸಿದರು.
"ಈ ವಿಚಾರದ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಇದನ್ನು ತಿರಸ್ಕರಿಸಲಾಗಿದೆ. ಆರ್ಥಿಕ ಇಲಾಖೆ ಹಣ ನೀಡುವುದು ಕಷ್ಟ ಎಂದು ತಿಳಿಸಿದೆ. ಆದರೆ, ನಾವು ಪುನಃ ಪ್ರಸ್ತಾವ ಸಲ್ಲಿಸಿದ್ದೇವೆ. ಸಿಬ್ಬಂದಿಗಳಿಗೆ ವೇತನ ಕೊಡಿಸುವ ಕಾರ್ಯವನ್ನು ಮಾಡುತ್ತೇನೆ. ಈ ವಿಚಾರವಾಗು ಸಿಎಂ ಅವರೊಂದಿಗೂ ಚರ್ಚೆ ಮಾಡಲಿದ್ದೇನೆ" ಎಂದು ಹೇಳಿದರು.
"ಕೊರೊನಾ ನಿವಾರಣೆಯಾಗದೇ ಇದ್ದ ಕಾರಣ, ಸಾರಿಗೆ ಬಸ್ನಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿಲ್ಲ. ಈ ಕಾರಣದಿಂದ ವರಮಾನ ಕಡಿಮೆಯಾಗಿದ್ದು, ವೇತನ ನೀಡಲು ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ" ಎಂದರು.