ಬೆಂಗಳೂರು, ನ. 14 (DaijiworldNews/MB) : ''ಆರ್ಎಸ್ಎಸ್ ಒಂದು ಹಿಂದೂ ಸಂಘಟನೆಯಲ್ಲ, ಅದು ಜಾತಿ ಸಂಘಟನೆಯಾಗಿದೆ'' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಿದ್ದರಾಮಯ್ಯನವರು ಕೆಪಿಸಿಸಿ ಕಚೇರಿಯಲ್ಲಿ ಜವಾಹರ್ ಲಾಲ್ ನೆಹರು ಜನ್ಮದಿನ ಪ್ರಯುಕ್ತ ನೆಹರುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ''ಸ್ವಾತಂತ್ರ್ಯಕ್ಕೂ ಮುನ್ನ ಬಿಜೆಪಿ ಎಲ್ಲಿತ್ತು. ಸ್ವಾತಂತ್ರ್ಯಕ್ಕೆ ಆರ್ಎಸ್ಎಸ್ ಕೊಡುಗೆ, ಬಲಿದಾನವೇನು. ಇತಿಹಾಸವನ್ನು ತಿರುಚುವುದರಲ್ಲೇ ಬಿಜೆಪಿಯವರು ತೊಡಗಿದ್ದಾರೆ'' ಎಂದು ದೂರಿದ್ದು ''ನಾವೇನು ಹಿಂದೂಗಳು ಅಲ್ವಾ, ನೀವು ಕೂಡಾ ಹೇಳಬೇಕು ನಾವು ಹಿಂದೂ ಅಂತ. ಗಾಂಧೀಜಿ, ನೆಹರು ಹಿಂದೂ ಅಲ್ವಾ'' ಎಂದು ಪ್ರಶ್ನಿಸಿದರು.
''ಬಿಜೆಪಿಯವರು ಈಗ ಭಗತ್ ಸಿಂಗ್, ವಿವೇಕಾನಂದರ ಹೆಸರನ್ನು ಹೇಳಿಕೊಳ್ಳುತ್ತಾರೆ. ಪಟೇಲರ ಪ್ರತಿಮೆ ಹಾಕಿ ಆರ್ಎಸ್ಎಸ್ ಎಂದು ಹೇಳುತ್ತಾರೆ. ಆದರೆ ನಿಜವಾಗಿ ಇವರೆಲ್ಲಾ ಸ್ವಾತಂತ್ಯ್ರ ಯೋಧರು. ಅವರನ್ನು ಆರ್ಎಸ್ಎಸ್ ನಮ್ಮವರು ಎಂದು ಹೇಳಿಕೊಳ್ಳುತ್ತಿದೆ. ಸುಳ್ಳು ಎಂಬುದೇ ಆರ್ಎಸ್ಎಸ್, ಅವರಿಂದಾಗಿಯೇ ಈ ಸುಳ್ಳು ಎಂಬುದು ಹುಟ್ಟಿಕೊಂಡಿದೆ'' ಎಂದು ಆರ್ಆರ್ಎಸ್, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
''ನೆಹರು ಕುಟುಂಬವು ಸ್ವಾತಂತ್ಯ್ರಕ್ಕಾಗಿ ಜೀವ ಬಲಿದಾನ ಮಾಡಿದೆ. ಆದರೆ ಅವರ ಹೆಸರನ್ನು ಬಿಜೆಪಿಯವರು ಯಾಕೆ ಹೇಳಲ್ಲ. ಬಿಜೆಪಿಯವರು ಸ್ವಾತಂತ್ಯ್ರಕ್ಕಾಗಿ ಏನು ಮಾಡಿಲ್ಲ'' ಎಂದು ಹೇಳಿದರು.
''ಹೆಡಗೆವಾರ್ , ಗೋಲ್ವಾಲ್ಕರ್ ಪ್ರಧಾನಿ ಆಗಿದ್ದಿದ್ದರೆ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಇರುತ್ತಿತ್ತು'' ಎಂದು ಹೇಳಿದ ಅವರು ''ಪ್ರಸ್ತುತ ಪ್ರಧಾನಿಯಾಗಿರುವ ನರೇಂದ್ರ ಮೋದಿ ಭಾರತದ ಅತ್ಯಂತ ಸುಳ್ಳಿನ ಪ್ರಧಾನಿ'' ಎಂದು ಟೀಕಿಸಿದರು.